ಹಳಿ ತಪ್ಪಿದ ಗೂಡ್ಸ್ ರೈಲು

New Goods Train
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಸೊನಾಲಿಯಮ್ ಮತ್ತು ದೂಧಸಾಗರ ನಿಲ್ದಾಣಗಳ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಅಂದಾಜು 2 ಗಂಟೆಗೆ ಸಂಭವಿಸಿದೆ.

ಘಟನೆಯಿಂದಾಗಿ ವಿವಿಧ ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಭಾಗಶಃ ರದ್ದುಗೊಳಿಸಲಾಗಿದೆ.

ಗುರುವಾರ ಸಂಚಾರ ಪ್ರಾರಂಭಿಸಿದ ವಾಸ್ಕೊ-ಹಜರತ್ ನಿಜಾಮುದ್ದಿನ್ ಎಕ್ಸ್​ಪ್ರೆಸ್ ರೈಲು ಬದಲಾದ ಮಾರ್ಗ ಮಡಗಾಂವ, ರೊಹಾ, ಪಾನ್ವೆಲ್, ಪುಣೆ, ದೌಂಡ್ ಚೊರ್ಡ್ ಲೈನ್ ಮತ್ತು ಮ್ಯಾನಮ್ಯಾಡ್ ನಿಲ್ದಾಣಗಳ ಮುಖಾಂತರ ಸಂಚರಿಸಿತು.

ಸೆ. 10ರಂದು ಸಂಚಾರ ಪ್ರಾರಂಭಿಸಿದ್ದ ಶಾಲಿಮಾರ-ವಾಸ್ಕೊ ಎಕ್ಸ್​ಪ್ರೆಸ್ ರೈಲು ಲೋಂಡಾ ನಿಲ್ದಾಣದವರೆಗೆ ಮಾತ್ರ ಸಂಚರಿಸಿತು.

ಸೆ. 13ರಂದು ಸಂಚರಿಸಲಿರುವ ವಾಸ್ಕೊ-ಶಾಲಿಮಾರ ಎಕ್ಸ್​ಪ್ರೆಸ್ ರೈಲು ವಾಸ್ಕೊ ಬದಲು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ.

ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಅಮರಾವತಿ ಎಕ್ಸ್​ಪ್ರೆಸ್ ರೈಲು ಲೋಂಡಾ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದು, ರೈಲಿನಲ್ಲಿನ ಅಂದಾಜು 1,100 ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿ ಆಹಾರ ಮತ್ತು ನೀರು ಪೂರೈಕೆಯ ವ್ಯವಸ್ಥೆ ಒದಗಿಸಿದ್ದಾರೆ. ಲೋಂಡಾದಿಂದ ಪ್ರಯಾಣಿಕರ ಪ್ರಯಾಣಿಕ್ಕಾಗಿ 25 ಸಾರಿಗೆ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ.

ಅಪಘಾತ ಪರಿಹಾರ ರೈಲನ್ನು ವಾಸ್ಕೊ ನಿಲ್ದಾಣದಿಂದ ಕಳುಹಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ಜಿಎಂ, ಎಜಿಎಂ ಹಾಗೂ ಇತರ ಹಿರಿಯ ಅಧಿಕಾರಿಗಳು ಗೂಡ್ಸ್ ರೈಲನ್ನು ಮರಳಿ ಹಳಿ ಮೇಲೆ ಇಟ್ಟು, ಸಂಚಾರ ಮರುಸ್ಥಾಪಿಸಲು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net