

ಮಂಡ್ಯ: ಜಿಲ್ಲೆಯ ಪ್ರವಾಸದ ಅವಧಿಯಲ್ಲಿ 445 ಹೊಸ ದೂರು ದಾಖಲಿಸಿದೆ. ಈ ಪೈಕಿ 155 ಪ್ರಕರಣಗಳನ್ನು ವಿಚಾರಣೆ ಮಾಡಲಾಗಿದೆ. ಅಂತೆಯೇ ಹೊಸ ಪ್ರಕರಣದಲ್ಲಿ 54 ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 157 ಬಾಕಿ ಪ್ರಕರಣವನ್ನು ವಿಚಾರಣೆ ಮಾಡಲಾಗಿದೆ. ಈ ಪೈಕಿ 62 ಮುಕ್ತಾಯಗೊಳಿಸಲಾಗಿದೆ. ಒಟ್ಟಾರೆ 116 ಪ್ರಕರಣವನ್ನು ಪೂರ್ಣಗೊಳಿಸಲಾಗಿದೆ. ಇನ್ನು ಪ್ರವಾಸದ ಅವಧಿಯಲ್ಲಿ 26 ಸ್ಥಳಕ್ಕೆ ಭೇಟಿ ನೀಡಲಾಗಿತ್ತು. ಅಧಿಕಾರಿಗಳ ಕರ್ತವ್ಯಲೋಪ ಹಿನ್ನೆಲೆಯಲ್ಲಿ 23 ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಗಮನಕ್ಕೆ ಬಂದಿವೆ. ಅವುಗಳಲ್ಲಿ 200 ವರ್ಷಗಳಿಂದಲೂ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕಲುಷಿತ ನೀರು ಕಾವೇರಿ ಒಡಲು ಸೇರುತ್ತಿರುವುದನ್ನು ತಪ್ಪಿಸುವ ಕೆಲಸ ಮಾಡಿದ್ದು ಹಾಗೂ ಹಲವು ವರ್ಷದಿಂದ ಕೆ.ಆರ್.ಪೇಟೆಯ ಸೋಮಶೇಖರ್, ಗಿರೀಶ್ ಹಾಗೂ ಮತ್ತೋರ್ವ ಸಹೋದರರ ನಡುವೆ ನಿವೇಶನ ವಿಚಾರಕ್ಕೆ ವ್ಯಾಜ್ಯ ಉಂಟಾಗಿದ್ದು, ಎಲ್ಲರಿಗೂ ತಿಳಿ ಹೇಳಿ ಮೊಕದ್ದಮೆ ವಾಪಸ್ ಪಡೆದು ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಖುಷಿ ನೀಡಿದೆ ಎಂದರು.
ಇಂಡುವಾಳು ಹಾಗೂ ಮಂಡ್ಯ ಗ್ರಾಮಾಂತರ ಪಂಚಾಯಿತಿಗಳಲ್ಲಿ ಕರ್ತವ್ಯ ಲೋಪ, ಹಣ ದುರುಪಯೋಗ, ಹೆಚ್ಚಿನ ಬ್ಯಾಂಕ್ ವ್ಯವಹಾರ ನಡೆಸಿರುವುದ ಕಂಡುಬಂದಿದೆ. ಈ ಬಗ್ಗೆ ಜಿ.ಪಂ ಸಿಇಒ ಅವರ ಗಮನಕ್ಕೆ ತಂದಿದ್ದು, ಈ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇಬ್ಬರು ಪಿಡಿಒಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮಂಡ್ಯ ತಾ.ಪಂ.ನಲ್ಲಿ ದಾಖಲಾತಿಗಳನ್ನು ಸರಿಯಾಗಿ ಇಟ್ಟಿಲ್ಲ. ಭೇಟಿ ನೀಡಿದ ವೇಳೆ ಸಿಬ್ಬಂದಿ ಇರಲಿಲ್ಲ. ಹಲವಾರು ದೂರು ಬಂದಿದ್ದರೂ ಅವುಗಳನ್ನು ಮೇಲಧಿಕಾರಿಗೆ ತಿಳಿಸದೆ ಕರ್ತವ್ಯಲೋಪವೆಸಗಿದ್ದಾರೆ. 90 ಸಾವಿರ ರೂ ವೇತನ ಪಡೆಯುತ್ತಿದ್ದರೂ, ಅವರ ಖಾತೆಯಲ್ಲಿ ಹೆಚ್ಚಿನ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ ಎಂದರು.
ಕರೀಘಟ್ಟದ ಕಾಡಿಗೆ ಬೆಂಕಿ ಹಾಕಿದರೆ ಮಕ್ಕಳಾಗುತ್ತವೆಂಬ ಮೂಢನಂಬಿಕೆಯನ್ನು ತೊಡೆದುಹಾಕಲು ಸ್ಥಳೀಯರಿಗೆ ಮನವರಿಕೆ ಮಾಡಿ 1 ಸಾವಿರ ಬೀಜದ ಉಂಡೆಗಳನ್ನು ಅಲ್ಲಿ ನೆಡಲಾಗಿದೆ. ಇದು ತಮಗೆ ಅತೀವ ಸಂತಸ ತಂದಿದೆ. ಶ್ರೀರಂಗಪಟ್ಟಣದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಪರವಾನಗಿ ಇಲ್ಲ. ಮೋಜು ಮಸ್ತಿ ಮಾಡುತ್ತಿರುವುದಾಗಿ ದೂರು ನೀಡಲಾಗಿದೆ. ಡಿಜೆ ಸೌಂಟ್ ಮಾಡಿ ಶಬ್ಧ ಮಾಲಿನ್ಯ ಮಾಡುವ ಮೂಲಕ ಪಕ್ಷಿ ಸಂಕುಲಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.
ಮಿಮ್ಸ್‌ನಲ್ಲಿ ರೋಗಿಗಳಿಗೆ ಪ್ರತ್ಯೇಕ ಸಾಲುಗಳಿಲ್ಲ. ರೇಡಿಯಾಲಜಿ ವಿಭಾಗದಲ್ಲಿ ಹೆಚ್ಚಿನ ಒತ್ತಡ ಇದೆ. ಹೆಚ್ಚುವರಿ ಎಂಆರ್‌ಐ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೈಮಗ್ಗ ಜಳವಳಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಕಾರ, ನಗರಾಭಿವೃದ್ಧಿ ಕೋಶ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳಲ್ಲೂ ಲೋಪದೋಷ ಕಂಡುಬಂದಿದ್ದು, ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಂಡುಬಂದ ಲೋಪದೋಷವನ್ನು ಒಂದು ತಿಂಗಳಲ್ಲಿ ಸರಿಪಡಿಸುವಂತೆ ಸೂಚಿಸಲಾಗಿದೆ. ನಮ್ಮ ತಾಂತ್ರಿಕ ತಂಡ, ಕಾನೂನು ಸೇವಾ ಪ್ರಾಧಿಕಾರ, ಲೋಕಾಯುಕ್ತ ಎಸ್ಪಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ತಾಕೀತು ಮಾಡಲಾಗಿದೆ. ಈ ಬಗ್ಗೆ ನಿಗಾ ವಹಿಸುವುದಾಗಿ ತಿಳಿಸಿದರಲ್ಲದೆ, ಮತ್ತೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತೇನೆ. ಆಗ ತಾಲೂಕು, ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡುತ್ತೇನೆ. ಭ್ರಷ್ಟರನ್ನು ಸದಬಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರದಲ್ಲಿ ಮಂಡ್ಯವೂ ಸೇರಿದಂತೆ ಕರ್ನಾಟಕ 5ನೇ ಸ್ಥಾನದಲ್ಲಿದೆ. ಲೋಕಾಯುಕ್ತರು ಆಗಾಗ್ಗೆ ಭ್ರಷ್ಟರ ಮೇಲೆ ದಾಳಿ ಮಾಡಿ ಅವರ ಬಣ್ಣ ಬಯಲು ಮಾಡುತ್ತೇವೆ. ಜತೆಗೆ ಶಿಕ್ಷೆ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಲೋಕಾಯುಕ್ತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇದ್ದರು.