ಶಂಕರ ವಲಯದ ಉಪ ಅರಣ್ಯಾಧಿಕಾರಿ ಅಮಾನತು

narendra kumar
ಶಂಕರ ವಲಯದ ಉಪ ಅರಣ್ಯಾಧಿಕಾರಿ ಬಿ.ಜಿ.ನರೇಂದ್ರ ಕುಮಾರ್
Published on

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಅಗೌರವ ತೋರಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಶಂಕರ ವಲಯದ ಉಪ ಅರಣ್ಯಾಧಿಕಾರಿ ಬಿ.ಜಿ.ನರೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ.

ಶಂಕರ ವಲಯದ ಕಸಬಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನರೇಂದ್ರ ಕುಮಾರ್ ಅವರು ಮುಖ್ಯಮಂತ್ರಿ ಹಾಗೂ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಎ.ಜಿ.ಯೋಗೇಂದ್ರ ಎಂಬುವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಸೂಚಿಸಲಾಗಿತ್ತು. ತನಿಖೆ ನಡೆಸಿದ ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ನರೇಂದ್ರ ಕುಮಾರ್ ಅವರು ಸಿಎಂ ಹಾಗೂ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಸರ್ಕಾರಿ ನೌಕರರಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿರುವುದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತುಗೊಳಿಸುವಂತೆ ಶಿವಮೊಗ್ಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಅವರಿಗೆ ವರದಿ ಸಲ್ಲಿಸಿದ್ದರು.

ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವರದಿ ಆಧರಿಸಿ ಸಿಸಿಎಫ್ ಹನುಮಂತಪ್ಪ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ವಲಯ ಕಚೇರಿಯನ್ನು ಕೇಂದ್ರಸ್ಥಾನವಾಗಿ ನಿಗದಿಪಡಿಸಿದ್ದು ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡದಂತೆ ಅಮಾನತು ಆದೇಶದಲ್ಲಿ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net