ಕಡಿಮೆ ಖರ್ಚಿನಲ್ಲಿ ರೈತರಿಗೆ ಪರಿಹಾರ ಒದಗಿಸಿ

Deputy Director of Agriculture, Pest, Disease Control, Technical Conference, Farmer, Relief,
ವಿಜಯಪುರ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಹಿಂಗಾರು ಹಂಗಾಮಿನ ಎರಡು ದಿನಗಳ ವಾರ್ಷಿಕ ತಾಂತ್ರಿಕ ಸಮ್ಮೇಳನವನ್ನು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಡಾ. ಪ್ರಕಾಶ ಚೌಹಾಣ್ ಉದ್ಘಾಟಿಸಿದರು. ಮುಖ್ಯಸ್ಥ ಡಾ. ಪಿ.ವಿ. ಪಾಟೀಲ, ವಿದ್ಯಾಧಿಕಾರಿ ಡಾ. ಐ.ಕೆ. ಕಾಳಪ್ಪನವರ, ಸಹ ಸಂಶೋಧನಾ ನಿರ್ದೇಶಕ ಡಾ. ಶೇಖರಪ್ಪ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಇತರರಿದ್ದರು.
Published on

ವಿಜಯಪುರ: ವಿಜ್ಞಾನಿಗಳು ಕೀಟ ರೋಗಗಳ ಹತೋಟಿಗಾಗಿ ಕಡಿಮೆ ಖರ್ಚಿನ, ಅದರಲ್ಲೂ ಸಾವಯವ ಮೂಲಕ ರೋಗ ಹತೋಟಿ ಕ್ರಮಗಳ ಬಗ್ಗೆ ಚರ್ಚಿಸಿ, ರೈತರಿಗೆ ಪರಿಹಾರ ಒದಗಿಸಬೇಕು ಎಂದು ವಿಜಯಪುರ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಡಾ. ಪ್ರಕಾಶ ಚೌಹಾಣ್ ಹೇಳಿದರು.\

ಸೋಮವಾರ ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಹಿಂಗಾರು ಹಂಗಾಮಿನ ಎರಡು ದಿನಗಳ ವಾರ್ಷಿಕ ತಾಂತ್ರಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಈ ಬಾರಿ ಸೂಕ್ತ ಕಾಲದಲ್ಲಿ ಸಮರ್ಪಕ ಮಳೆಯಾಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮುಂಗಾರು ಹಂಗಾಮು ಸ್ವಲ್ಪ ತೊಂದರೆದಾಯವಾಗಲಿದ್ದು, ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ ಮತ್ತು ಇನ್ನಿತರ ಅಕ್ಕಡಿಕಾಳು ಬೆಳೆಗಳ ಕೀಟ ರೋಗ ಹತೋಟಿಗೆ ಮುಂದಾಗಲು ಸಲಹೆ ನೀಡಿದರು.

ಸಸ್ಯರೋಗ ಶಾಸ್ತ್ರದ ವಿಭಾಗ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಪಿ.ವಿ. ಪಾಟೀಲ ಮಾತನಾಡಿ, ವಿಜ್ಞಾನಿಗಳು ರೈತರಿಗೋಸ್ಕರ ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿದ್ದು, ಈ ಭಾಗದ ರೈತರಿಗಾಗಿ ಬೆಳೆ ಹತೋಟಿಗಾಗಿ ವಿವಿಧ ಬೀಜೋಪಚಾರ ಪದ್ಧತಿ, ಜೈವಿಕ ಪೀಡಿನಾಶಕಗಳ ಬಳಕೆ, ಅಗತ್ಯ ಬಿದ್ದರೆ ಮಾತ್ರ ರಾಸಾಯನಿಕ ಶಿಲೀಂದ್ರ ನಾಶಕಗಳ ಬಳಕೆ ಕುರಿತಂತೆ ವಿಸ್ತೃತ ಚರ್ಚೆ ಮಾಡಲಾಗುವುದು. ಎರಡು ದಿನ ನಡೆಯುವ ಸಭೆಯಲ್ಲಿ, ರೈತರಿಗೆ ಅನುಕೂಲವಾಗುವ ತಾಂತ್ರಿಕತೆಗಳನ್ನು ಅನ್ವೇಷಿಸಲು ಮತ್ತು ಕಾರ್ಯಸೂಚಿ ರೂಪಿಸಲು ಪ್ರಯತ್ನಿಸಲಾಗುವುದೆಂದರು.

ಸಹ ಸಂಶೋಧನಾ ನಿರ್ದೇಶಕ ಡಾ. ಶೇಖರಪ್ಪ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಕಡಿಮೆ ಖರ್ಚಿನ, ರೈತೋಪಯೋಗಿ ಮತ್ತು ಸುಲಭವಾಗಿ ಅಳವಡಿಸಿಕೊಳ್ಳುವ, ರೋಗ ನಿಯಂತ್ರಕ ಔಷಧಿಗಳ ಕುರಿತಂತೆ ತಾಂತ್ರಿಕ ಅಧಿವೇಶನದಲ್ಲಿ ಚರ್ಚಿಸಲು ಸಲಹೆ ನೀಡಿದರು.

ವಿದ್ಯಾಧಿಕಾರಿ ಡಾ. ಐ.ಕೆ. ಕಾಳಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಸುಖವಾಗಿದ್ದರೆ ನಾವೆಲ್ಲ ಸುಖದಿಂದ ಇರಲು ಸಾಧ್ಯ. ಹಾಗಾಗಿ ರೈತರಿಗೆ ಹೊರೆಯಾಗದ ಹಾಗೆ ವಿವಿಧ ಬೆಳೆಗಳಿಗೆ ತಗಲುವ ರೋಗಗಳ ಮತ್ತು ಅವುಗಳ ಹತೋಟಿ ಕುರಿತಂತೆ ಸಮ್ಮೇಳನದಲ್ಲಿ ಬೆಳಕು ಚೆಲ್ಲಲಾಗುವುದು ಎಂದರು.
ವಿಭಾಗ ಮುಖ್ಯಸ್ಥ ಡಾ. ಕೆ.ಬಿ. ಯಡಹಳ್ಳಿ, ಡಾ. ಶ್ಯಾಮರಾವ ಜಹಾಗಿರದಾರ, ಡಾ.ಶ್ರೀಪಾದ ಕುಲಕರ್ಣಿ, ಡಾ. ಎಂ.ಎಂ. ಜಮಾದಾರ, ಡಾ. ಪ್ರಶಾಂತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿವಿಧ ಮಹಾವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಿಂದ ಆಗಮಿಸಿದ ಸಸ್ಯರೋಗ ಶಾಸ್ತ್ರ ವಿಭಾಗದ ವಿಜ್ಞಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net