ಎಲ್ಲೆಡೆ ಸಲ್ಲುವ ರಾಜರಾಜೇಶ್ವರಿಯ ಉಪಾಸಕರು

GKN SHREE
Published on

ಗೋಕರ್ಣ: ಕೆಲವರು ಈ ಲೋಕದಲ್ಲಿ ಮಾತ್ರ ಸಲ್ಲುತ್ತಾರೆ. ಆ ಲೋಕದಲ್ಲಿ ಸಲ್ಲುವುದಿಲ್ಲ. ಇನ್ನು ಹಲವರು ಅಲ್ಲಿಯೂ, ಇಲ್ಲಿಯೂ ಎಲ್ಲಿಯೂ ಸಲ್ಲುವುದಿಲ್ಲ. ಆದರೆ, ಮಾತೆ ರಾಜರಾಜೇಶ್ವರಿಯ ಅಥವಾ ಲಲಿತಾ ತ್ರಿಪುರಸುಂದರಿಯ ನಿರತ ಉಪಾಸನೆ ಮಾಡುವವರು ಭೋಗಾಪವರ್ಗಗಳಿಗೆ ಅಂದರೆ, ಇಲ್ಲಿ ಮತ್ತು ಅಲ್ಲಿ ಎರಡೂ ಕಡೆಗಳಲ್ಲಿ ಸಲ್ಲುವಂತಾಗುವರು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸೋಮವಾರ ಸಾಗರದ ಶ್ರೀ ರಾಘವೇಶ್ವರ ಭಾರತೀ ಸಭಾಭವನದಲ್ಲಿ ಪ್ರಾರಂಭವಾದ ನವರಾತ್ರಿ ನಮಸ್ಯಾ ಮತ್ತು ಪ್ರವಚನ ಮಾಲಿಕೆಯನ್ನು ಶ್ರೀಲಲಿತಾದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ಆರತಿ ಬೆಳಗುವ ಮೂಲಕ ಉದ್ಘಾಟಿಸಿ ಸರ್ವರನ್ನು ಆಶೀರ್ವದಿಸಿದರು.

ಯಾರು ಲಲಿತಾಮಾತೆಯ ಆರಾಧನೆ ಮಾಡುತ್ತಾರೊ ಅವರು ಸಂಪತ್ತಿನ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ. ಸಂಪತ್ತು ತಾನೆ ತಾನಾಗಿ ಅಂತಹ ಉಪಾಸಕರನ್ನು ಅರಸಿ ಬರುತ್ತದೆ. ಇದೇ ಹಿನ್ನೆಲೆಯಿಂದ ಆಕೆಯನ್ನು ನಮ್ಮ ಪುರಾಣಗಳು ಶ್ರೀ ಲಲಿತಾ ಎಂದು ಪೂಜಿಸಿವೆ. ಶ್ರೀವಿದ್ಯಾ ಎಂಬುದು ಆಕೆಯ ಉಪಾಸನೆಯ ಹೆಸರಾಗಿದೆ. ಇಂತಹ ಶ್ರೀ ಲಲಿತೆಯ ಅನುಗ್ರಹದಿಂದ ಅಘಟಿತ ಘಟನೆಗಳು ಘಟಿಸುತ್ತವೆ. ಇದಕ್ಕೆ ಶನಿವಾರ ಸಾಗರದಲ್ಲಿ ನಡೆದ ಅಭೂತಪೂರ್ವವಾದ ವೈಭವದ ಶೋಭಾಯಾತ್ರೆ ಮತ್ತು ನವರಾತ್ರಿ ನಮಸ್ಯಾ ಸಮಾರಂಭಕ್ಕಾಗಿ ಪ್ರವಾಹದಂತೆ ಹರಿದು ಬಂದ ದವಸ ಧಾನ್ಯಗಳ ಸುವಸ್ತು ಭಂಡಾರಗಳು ಸಾಕ್ಷಿಯಾಗಿವೆ. ಮಿಗಿಲಾದುದನ್ನು ದಯಪಾಲಿಸುವ ಆಕೆಯ ಮಹಿಮೆಯಿಂದ ದೈಹಿಕ, ವಾಚಿಕ, ಮಾನಸಿಕ ಪಾಪಗಳಲ್ಲದೆ ಆತ್ಮ ಕಲ್ಮಶಗಳು ಕೂಡ ನಾಶವಾಗಿ ಪಾಪಗಳಿಂದ ಬಿಡುಗಡೆ ಪ್ರಾಪ್ತವಾಗುತ್ತದೆ ಎಂದರು.

ಭಂಡಾಸುರ ವೃತ್ತಾಂತ:

ಪ್ರಥಮ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು ರುದ್ರನಿಂದ ಭಂಡಾಸುರನ ಉದ್ಭವ. 60 ಸಾವಿರ ವರ್ಷದ ವರದಿಂದಾದ ಆತನ ಪ್ರವರ್ಧಮಾನ. ವಿಷ್ಣುವಿನ ಪ್ರಭಾವದಿಂದ ಮಾಯಾ ಮೋಹಿನಿಯ ಅವತಾರ. ಆಕೆಯ ಮೂಲಕ ಭಂಡಾಸುರನ ಪತನದ ಪ್ರಾರಂಭ. ಇಂದ್ರಾದಿ ದೇವತೆಗಳಿಂದ ಪುನಃ ಪಟ್ಟ ಪ್ರಾಪ್ತಿಗಾಗಿ ಕಠಿಣ ತಪಸ್ಸು ಮತ್ತು ಸ್ವಮಾಂಸದ ಮಹಾಯಾಗ. ಕೊನೆಯಲ್ಲಿ ಕೋಟಿ ಸೂರ್ಯ ಪ್ರಭೆ ಮತ್ತು ಕೋಟಿ ಚಂದ್ರ ಶೀತಲ ಬೆಳಕಿನಲ್ಲಿ ಶ್ರೀ ಲಲಿತಾದೇವಿಯ ಪ್ರಾದುರ್ಭಾವದವರೆಗಿನ ಉಪಾಖ್ಯಾನಗಳನ್ನು ಶ್ರೀಗಳು ವರ್ಣಿಸಿ ಇಂತಹ ತೇಜಸ್ಸಿನ ಧಾರಣೆ ನಿಮ್ಮದಾಗಲಿ. ಈ ಬೆಳಕಿನಿಂದ ನಿಮ್ಮ ಹೃದಯ, ನಿಮ್ಮ ಜೀವನ ಮತ್ತು ಕವಿದ ಕತ್ತಲು ಬೆಳಗುವಂತಾಗಲಿ ಎಂದು ಶ್ರೀಗಳು ಸಮಸ್ತರನ್ನು ಅನುಗ್ರಹಿಸಿದರು.

ಸೋಮವಾರ ಬೆಳಗ್ಗೆ ನವರಾತ್ರಿ ನಮಸ್ಯಾ ನಿಮಿತ್ತದ ವಿವಿಧ ಧಾರ್ವಿುಕ ಕಾರ್ಯಗಳು ಸಂಪನ್ನವಾದವು. ಕಾರ್ಯಕ್ರಮದಲ್ಲಿ ಆಯೋಜಿತವಾದ ಸಮಾಜ ಸಂಭ್ರಮ ವಿಶೇಷ ಕಾರ್ಯಕ್ರಮದಲ್ಲಿ ಸಾಗರ ಪ್ರಾಂತದ ಗೌಡ ಸಾರಸ್ವತ ಸಮಾಜದ ಅಧ್ಯಕ್ಷ ವೆಂಕಟೇಶ ಪ್ರಭು ಮತ್ತು ವೈಶ್ಯವಾಣಿ ಸಮಾಜದ ಅಧ್ಯಕ್ಷ ಸತ್ಯನಾರಾಯಣ ಅವರನ್ನು ಗೌರವಿಸಲಾಯಿತು. ಸಮಿತಿ ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಸಂಚಾಲಕ ಮುರಳಿ ಗೀಜಗಾರು, ಹವ್ಯಕ ಮಹಾಮಂಡಲ ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಉಪಾಧ್ಯಕ್ಷ ಶಾಂತಾರಾಮ ಹಿರೇಮನೆ, ರಮೇಶ ಹೆಗಡೆ ಗುಂಡೂಮನೆ, ಶ್ರೀನಾಥ ಸಾರಂಗ, ಎಂ.ಜಿ. ರಾಮಚಂದ್ರ, ಶಿವರಾಮಯ್ಯ,ಗೌತಮ.ರವಿ ಕೈತೋಟ ಮತ್ತು ಸರ್ವ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net