

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿರುವ ಕಡಲೆ ಕಾಳು ಉತ್ಪನ್ನ ಖರೀದಿ ಕೇಂದ್ರಕ್ಕೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಾಲ್ಗೆ 5,650 ರೂ. ದರ ನೀಡಿ ಖರೀದಿಸುತ್ತಿದೆ. ಬ್ಯಾಹಟ್ಟಿ ಸೇರಿ ಸುತ್ತಲಿನ ಗ್ರಾಮಗಳ ರೈತರಿಗೆ ಕೇಂದ್ರದ ಬಗ್ಗೆ ಮಾಹಿತಿ ತಲುಪಬೇಕು. ನೋಂದಣಿ, ಖರೀದಿಗೆ ಅಗತ್ಯ ದಾಖಲೆಗಳು, ಕೊನೆ ದಿನಾಂಕ, ಕೇಂದ್ರದ ಸಮಯ ಕುರಿತು ಡಂಗುರ ಸಾರಿ ಮಾಹಿತಿ ನೀಡಬೇಕು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಖರೀದಿ ಕೇಂದ್ರದ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ರೈತರ ಉತ್ಪನ್ನವನ್ನು ಸರ್ಕಾರ ಕೇಂದ್ರಗಳ ಮೂಲಕ ನೇರವಾಗಿ ಖರೀದಿಸುತ್ತಿದೆ. ರೈತರು ಮದ್ಯವತಿರ್ಗಳಿಗೆ ನೀಡದೆ ಕೇಂದ್ರಕ್ಕೆ ನೀಡಬೇಕು. ರೈತರಿಗೆ ಮೋಸವಾಗದಂತೆ ಜಾಗೃತಿ ವಹಿಸಬೇಕು ಎಂದರು.
ಸುಭಾಸ ಗಿಡ್ನವರ ಮಾತನಾಡಿ, ಖರೀದಿ ಕೇಂದ್ರ ವ್ಯಾಪ್ತಿಗೆ ಬ್ಯಾಹಟ್ಟಿ, ಸುಳ್ಳ ಮತ್ತು ಕುಸುಗಲ್ಲ ಗ್ರಾಮಗಳ ಸುಮಾರು 1,400 ರೈತರು ಬರುತ್ತಾರೆ. ಈಗಾಗಲೇ ಹಳ್ಳಿಗಳಲ್ಲಿ ಕರಪತ್ರ ಹಂಚಿ, ಬ್ಯಾನರ್ ಅಳವಡಿಸಿ ಜಾಗೃತಿ ಮೂಡಿಸಲಾಗಿದೆ. ಜ. 30ರಿಂದ ಖರೀದಿ ಆರಂಭಿಸಲಾಗಿದೆ. ಏ. 12 ನೋಂದಣಿಗೆ ಮತ್ತು ಏ. 25 ಖರೀದಿಗೆ ಅಂತಿಮ ದಿನವಾಗಿದೆ ಎಂದರು.
ಬಸನಗೌಡ ಪಾಟೀಲ, ಹುಬ್ಬಳ್ಳಿ ತಹಸೀಲ್ದಾರ ಜೆ.ಬಿ.ಮಜ್ಜಗಿ, ಗ್ರಾಪಂ ಪಿಡಿಒ ರೇಣುಕಾ ಚಿತ್ತಾಪುರ, ಎಂ.ಆರ್. ನಿಟ್ಟೂರ, ಮನೋಹರ ಮರಿಗೌಡ, ರುದ್ರಗೌಡ ಮಳಲಿ, ಯಲ್ಲಪ್ಪ ನವಲೂರ, ಗ್ರಾಪಂ ಸದಸ್ಯರು, ಇತರರು ಇದ್ದರು.