ಹತ್ತು ದಿನದಲ್ಲಿ ಒತ್ತುವರಿ ತೆರವು ವಿಸ್ತೃತ ವರದಿ ನೀಡಿ...

Swaroopa
Published on

ಅಧಿಕಾರಿಗಳಿಗೆ ಡಿಸಿ ಸ್ವರೂಪಾ ಟಿ.ಕೆ. ಆದೇಶ

ಕೋಡಿ ಕನ್ಯಾನ ಪ್ರದೇಶಕ್ಕೆ ಭೇಟಿ, ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೋಡಿ ಕನ್ಯಾನ ನದಿಯ ಹೂಳು ತೆಗೆದು, ಒತ್ತುವರಿ ಮಾಡಿರುವ ಪ್ರದೇಶ ತೆರವುಗೊಳಿಸಲು ಜಂಟಿಯಾಗಿ ವಿಸ್ತೃತ ಯೋಜನಾ ವರದಿ ತಯಾರಿಸಬೇಕು. 10 ದಿನದೊಳಗೆ ಪೂರಕ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಸಂಬಂಧಿತ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜುಲೈ 8ರಂದು ಬೆಳಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಅರಣ್ಯ, ಬಂದರು, ಸಣ್ಣ ನೀರಾವರಿ, ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರ, ಮೀನುಗಾರಿಕಾ ಹಾಗೂ ಮೀನುಗಾರಿಕಾ ಕಾಲೇಜು, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖಾ ಅಧಿಕಾರಿಗಳಿಗೆ ಗಡುವು ನೀಡಿದರು.

ಎನ್ ಜಿಟಿಯಿಂದ ಸೂಚನೆ

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್ ಜಿಟಿ)ಯ 27.07.2021ರ ನಿರ್ದೇಶನದಂತೆ ಉಡುಪಿ ಜಿಲ್ಲೆಯ ಕೋಡಿ ಕನ್ಯಾನ ನದಿಯ ಹೂಳು ತೆಗೆದು, ಒತ್ತುವರಿ ಮಾಡಿರುವ ಪ್ರದೇಶ ಪುನಶ್ಚೇತನಗೊಳಿಸಲು ಪೂರಕ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಗಳೂರಿನ ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವ ವಿದ್ಯಾಲಯದ ಮೀನುಗಾರಿಕಾ ಕಾಲೇಜು ಸಲ್ಲಿಸಿದ್ದ ವರದಿ ಹಿನ್ನೆಲೆಯಲ್ಲಿ ಡಿಸಿ ಸ್ವರೂಪಾ ಸಭೆ ನಡೆಸಿದರು.

ಸ್ಥಳ ಪರಿಶೀಲನೆ

ಸಭೆಯ ನಂತರ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಕೋಡಿ ಕನ್ಯಾನ ಪ್ರದೇಶಕ್ಕೆ ಭೇಟಿ ನೀಡಿದ ಡಿಸಿ ಸ್ವರೂಪಾ, ಸ್ಥಳ ಪರಿಶೀಲನೆ ನಡೆಸಿದರು. ಕೂಡಲೇ ಮಾಹಿತಿ ಕಲೆ ಹಾಕಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net