

ಮಡಿಕೇರಿ: ಅಂತರ ರಾಷ್ಟ್ರೀಯ ಕಾಫಿ ದಿನ ಪ್ರಯುಕ್ತ ಕಾಫಿ ಮಂಡಳಿ ವತಿಯಿಂದ ನಗರದ ರಾಜಾಸೀಟಿನಲ್ಲಿ ಆಯೋಜಿಸಿದ್ದ ’ಕಾಫಿ ಉತ್ಸವ’ದಲ್ಲಿ ಪ್ರವಾಸಿಗರು ಕಾಫಿ ಸವಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಕಾಫಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾಫಿ ಬೀಜ, ಕಾಫಿ ಬೀಜದಿಂದ ರೋಸ್ಟಿಂಗ್ ಮಾಡುವುದು, ನಂತರ ಪುಡಿ ಮಾಡಿ ಕಾಫಿ ತಯಾರಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ವಿವಿಧ ಮಂಡಳಿಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದು ವಾರಗಳ ಕಾಲ ಕಾಫಿ, ಜೇನು ಹಾಗೂ ವೈನ್ ಮೇಳ ಆಯೋಜಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.
ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶೇ.೭೦ ಕಾಫಿ ಬೆಳೆ ಬೆಳೆಯಲಾಗುತ್ತಿದ್ದು, ಕೊಡಗಿನ ಕಾಫಿಯನ್ನು ಎಲ್ಲೆಡೆ ಪಸರಿಸುವಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ಹಲವು ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬ್ರೆಜಿಲ್, ವಿಯಟ್ನಾಂ ದೇಶಗಳಲ್ಲಿ ಬಯಲು ಪ್ರದೇಶದಲ್ಲಿ ಕಾಫಿ ಬೆಳೆಯುತ್ತಾರೆ. ಆದರೆ ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಬೆಟ್ಟಗುಡ್ಡಗಳಿಂದ ಆವೃತ್ತವಾದ ಪ್ರದೇಶದಲ್ಲಿ ಕಾಫಿ ಬೆಳೆಯುವುದು ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ದಾಸ್, ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಇತರರು ಇದ್ದರು.