

ಮಡಿಕೇರಿ: ಯೋಗಥಾನ್ ಏರ್ಪಡಿಸುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ೧೫ ರಂದು ಯೋಗಥಾನ್ ಆಯೋಜಿಸುವ ಸಂಬಂಧ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್ ಆಯೋಜಿಸಲು ನಿರ್ಧರಿಸಲಾಗಿದೆ. ಯೋಗಥಾನ್ ಏರ್ಪಡಿಸುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳು ಯೋಗಥಾನ್ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಬೇಕು. ಜತೆಗೆ ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ಒಳಗೊಂಡು ಯೋಗಥಾನ್ ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಾಯಿಸಬೇಕು. ಯೋಗಥಾನ್‌ನಲ್ಲಿ ಪಾಲ್ಗೊಳ್ಳುವವರು ಕಾರ್ಪೆಟ್/ ಮ್ಯಾಟ್ ತರುವುದು, ಪಾಲ್ಗೊಳ್ಳುವವರಿಗೆ ವಾಹನ ಸೌಲಭ್ಯ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಮಾತನಾಡಿ, ಸರ್ಕಾರ ಜ೧೫ ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯೋಗಥಾನ್ ಕಾರ್ಯಕ್ರಮ ಆಯೋಜಿಸಲು ನಿರ್ದೇಶನ ನೀಡಿದೆ. ಆ ನಿಟ್ಟಿನಲ್ಲಿ ಜ೧೩ ಮತ್ತು ೧೪ ರಂದು ಪೂರ್ವಾಭ್ಯಾಸ ಮಾಡಿಕೊಳ್ಳಬೇಕಿದೆ. ಗಿನ್ನಿಸ್ ದಾಖಲೆ ಮಾಡಬೇಕಿರುವುದರಿಂದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ ೫ ಸಾವಿರ ಮಂದಿ ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ರೇಣುಕಾ ದೇವಿ ಮಾತನಾಡಿ, ಯೋಗಥಾನ್ ಕಾರ್ಯಕ್ರಮಕ್ಕೆ ಈಗಾಗಲೇ ೪,೬೦೦ ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿರ್ಮಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ತಹಶೀಲ್ದಾರ್ ಪಿ.ಎಸ್.ಮಹೇಶ್ ಇತರರು ಇದ್ದರು.