ಗಾಂಧೀಜಿ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ

Screenshot_2025-09-26-11-32-59-00.jpg
Published on

ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅಕ್ಟೋಬರ 2 ರಂದು ಬೆಳಿಗ್ಗೆ 9 ಗಂಟೆಗೆ 156 ನೇ ಗಾಂಧಿ ಜಯಂತಿಯನ್ನು ಧಾರವಾಡ ಹೊಸ ಬಸ್ ನಿಲ್ದಾಣ ಹತ್ತಿರದ ನೂತನವಾಗಿ ನಿರ್ಮಿಸಿರುವ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಜರುಗಿದ ಮಹಾತ್ಮ ಗಾಂಧೀಜಿಯವರ 156 ನೇ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧಿ ಜಯಂತಿ ಕಾರ್ಯಕ್ರಮವನ್ನು ನೂತನ ಗಾಂಧಿ ಭವನದಲ್ಲಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು ಗಾಂಧಿ ಭವನ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಹಾಗೂ ಸುತ್ತಲಿನ ಪ್ರದೇಶದ ಸ್ವಚ್ಛತೆ ಕೈಗೊಳ್ಳಬೇಕು. ಗಾಂಧಿ ಜಯಂತಿಯಂದು ಗಾಂಧಿ ಭವನವನ್ನು ಅಲಂಕರಿಸಿ, ಆಕರ್ಷಿಣೀಯವಾಗಿ ಸಿದ್ಧಗೊಳಿಸಬೇಕೆಂದು ಪಾಲಿಕೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ರಜಾ ದಿನವಾಗಿರುವದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಗಾಂಧಿ ವಿಚಾರ ಪ್ರಣಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗಾಂಧಿ ಪ್ರೀಯ ಭಜನೆಗಳು, ಸರ್ಮಧರ್ಮ ಪ್ರಾರ್ಥನೆ, ವಿಶೇಷ ಉಪನ್ಯಾಸ ಆಯೋಜಿಸಬೇಕು. ಈಗಾಗಲೇ ವಾರ್ತಾ ಇಲಾಖೆಯಿಂದ ಜಿಲ್ಲಾಮಟ್ಟದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪ್ರೌಢಶಾಲಾ ವಿಭಾಗ, ಪಿಯು ಕಾಲೇಜು ವಿಭಾಗ ಮತ್ತು ಪದವಿ ಹಾಗೂ ಸ್ನಾತಕೊತ್ತರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆಗೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಿಸಿರುವ ನೂತನ ಗಾಂಧಿ ಭವನವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಿಯಮಾನುಸಾರ ಹಸ್ತಾಂತರಿಸಲಾಗಿದ್ದು, ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು, ತತ್ವ ಸಿದ್ದಾಂತಗಳನ್ನು ಮತ್ತು ಅವರ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುವ ಹಾಗೂ ಮಾರ್ಗದರ್ಶನ ಮಾಡುವ ಕಾರ್ಯಕ್ರಮಗಳನ್ನು ಗಾಂಧೀಜಿ ಪ್ರಣಿತ ಸಂಘ-ಸಂಸ್ಥೆಗಳ, ಶಾಲಾ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಲು ಸೂಚಿಸಲಾಗಿದೆ. ಗಾಂಧೀಜಿಯವರ ಕುರಿತ ಕಾರ್ಯಕ್ರಮಗಳಿಗೆ ಗಾಂಧಿ ಭವನದ ಸಭಾಭವನವನ್ನು ಒದಗಿಸಲು ತಿಳಿಸಲಾಗಿದೆ. ಆಸಕ್ತರು, ಗಾಂಧಿ ವಿಚಾರಧಾರೆಗಳನ್ನು ಪ್ರಚುರಪಡಿಸುವ ಸಂಘಟನೆಗಳು, ಸಂಘ-ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಲಾಗುವುದು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ಮಹಾನಗರ ಪಾಲಿಕೆಯ ವಲಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಕಾನಕೊಂಕರ, ಶಾಲಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ, ಲೋಕೊಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಚ್. ವಿಜಯಕುಮಾರ, ಧಾರವಾಡ ತಹಶೀಲ್ದಾರ ಕಚೇರಿಯ ಕಂದಾಯ ನಿರೀಕ್ಷಕ ಗುರು ಸುಣಗಾರ ಮತ್ತು ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net