ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ

Untitled design (6)
ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ನಿತೀಶ ಕೆ. ಅಧಿಕಾರಿ-ಸಿಬ್ಬಂದಿ ಸಭೆ ನಡೆಸಿದರು. ಪೌರಾಯುಕ್ತ ಮಂಜುನಾಥ ಗುಂಡೂರು ಇದ್ದರು.
Published on

ಸಿಂಧನೂರು: ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ, ನೀರು ಸೇರಿ ಇತರ ತೆರಿಗೆಯಲ್ಲಿ ಶೇ.100 ಸಾಧನೆಯೊಂದಿಗೆ ಆರ್ಥಿಕ ಬಲ ಹೆಚ್ಚಿಸಲು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಜಿಲ್ಲಾಧಿಕಾರಿ ನಿತೀಶ ಕೆ. ತಿಳಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಿ ಮಾತನಾಡಿದರು. ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಇದರಿಂದ ನಗರಸಭೆಗೆ ಅನುಕೂಲವಾಗಲಿದೆ. ತೆರಿಗೆಯಲ್ಲಿ ಆಗಿರುವ ಸಾಧನೆಯ ಅನುಪಾಲನಾ ವರದಿ ನೀಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಉದ್ದಿಮೆ ಪರವಾನಿಗೆ, ಜಾಹೀರಾತು ಶುಲ್ಕ, ಎಸ್‌ಡಬ್ಲ್ಯುಎಂ ಶುಲ್ಕವನ್ನು ಸಂಗ್ರಹಿಸಲು ಆರೋಗ್ಯ ಶಾಖೆಯ ಸಿಬ್ಬಂದಿ ಮುಂದಾಗಬೇಕು. ಸಾರ್ವಜನಿಕರಿಗೆ ಅಗತ್ಯ ದಾಖಲಾತಿ ನೀಡುವಲ್ಲಿ ಯಾವುದೇ ಕಾರಣಕ್ಕೆ ವಿಳಂಬ ಮಾಡುವಂತಿಲ್ಲ. ಅರ್ಜಿ ಸಲ್ಲಿಸಿ, ಇಂತಿಷ್ಟು ದಿನಗಳು ನಿಗದಿಪಡಿಸಿದಂತೆ ದಾಖಲಾತಿ ಒದಗಿಸಬೇಕು. ದೂರುಗಳು ಬಂದರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆಂದರು.

ನಗರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ಮುಗಿಸಿದರೆ ಮಾತ್ರ ಅನುದಾನ ಸದ್ಬಳಕೆಯಾಗಲು ಸಾಧ್ಯ ಎಂದು ತಿಳಿಸಿದರು. ಪೌರಾಯುಕ್ತ ಮಂಜುನಾಥ ಗುಂಡೂರ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಎಇಇ ಮನ್ಸೂರ್, ಎಇ ಶಾಂತು, ಆರೋಗ್ಯ ನಿರೀಕ್ಷಕರಾದ ಕಿಶನ್, ಲಕ್ಷ್ಮೀಪತಿ, ಮಹೇಶ, ಕಂದಾಯಾಧಿಕಾರಿ ಮಾಧುರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net