ಭೂತ ಬಂಗಲೆಯಂತಿದೆ ಮಧುಗಿರಿ ರೇಷ್ಮೆ ಬಿತ್ತನೆ ಕೋಠಿ ; ಉದ್ಘಾಟನೆಯಾಗಿ 26 ವರ್ಷ ಕಳೆದರೂ ಟೇಕಾಫ್ ಆಗದ ಕಚೇರಿ

28 MDG 02 Photo
Published on

ಮಧುಗಿರಿ: ಪಟ್ಟಣದ ಹಿಂದುಪುರ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಯ ಮೂರು ಕಟ್ಟಡಗಳು ಉದ್ಘಾಟನೆಯಾಗಿ ಸುವಾರು 26 ವರ್ಷಗಳೇ  ಕಳೆದರೂ ಉಪಯೋಗಕ್ಕೆ ಬಾರದೆ ಭೂತ ಬಂಗಲೆಯಂತಿವೆ.

1993-94ರಲ್ಲಿ ಡಾ.ಜಿ.ಪರಮೇಶ್ವರ ರೇಷ್ಮೆ ಸಚಿವರಾಗಿದ್ದಾಗ 10 ಎಕರೆ ಪ್ರದೇಶದಲ್ಲಿ ವಾದರಿ ರೇಷ್ಮೆ ಬಿತ್ತನೆ ಕೋಠಿ, ಮೊಟ್ಟೆ ಉತ್ಪಾದನೆ ಕೇಂದ್ರ, ನೂಲು ಸುತ್ತುವ ಕೇಂದ್ರ ಮತ್ತು ಮಾರುಕಟ್ಟೆ ನಿರ್ಮಿಸಲಾಗಿತ್ತು. ಇನ್ನು ಹೋಬಳಿಯ ಕೆಂಪಾಪುರ ಸಮೀಪ 62 ಎಕರೆಯಲ್ಲಿ ಬರಪೀಡಿತ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ 1985ರಲ್ಲೇ ರೇಷ್ಮೆ ಹುಳುಗಳ ಸಾಕಾಣಿಕೆ ಕಟ್ಟಡ ನಿರ್ಮಿಸಲಾಗಿತ್ತು.

ಉದ್ಘಾಟನೆಗೊಂಡಾಗ ಇಲಾಖೆ ಕಚೇರಿಯನ್ನು ಈ ಕಟ್ಟಡಕ್ಕೆ ಸ್ಥಳಾಂತರ ಮಾಡಬಹುದಿತ್ತು. ಆದರೆ, ರೈತರಿಗೆ ದೂರವಾಗುತ್ತದೆ ಎಂದು ನಿರ್ಧಾರ ಕೈಬಿಡಲಾಗಿತ್ತು. ಈಗಲೂ ಪಟ್ಟಣದ ಡಿವೈಎಸ್ಪಿ ಕಚೇರಿ ಪಕ್ಕದಲ್ಲಿ ಕಿರಿದಾದ ಕಟ್ಟಡದಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 2013-14ರಲ್ಲಿ ಬಿತ್ತನೆ ಕೋಠಿಯಲ್ಲಿ ಮೊಟ್ಟೆ ಉತ್ಪಾದನೆ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆ ಸ್ಥಳಾಂತರ ಮಾಡಬಹುದಾಗಿತ್ತು. ಉಪವಿಭಾಗದ ರೈತರು ಇಂದಿಗೂ ಗೂಡು ಮಾರಾಟಕ್ಕೆ ರಾಮನಗರವನ್ನೇ ಅವಲಂಬಿಸಬೇಕಾಗಿದೆ.

ಬದುಕು ಕಸಿದ ಬರ: ಆರಂಭದಲ್ಲಿ ಇಲ್ಲಿ ಉತ್ಪಾದನೆಯಾಗುತ್ತಿದ್ದ ಮೊಟ್ಟೆಗೆ ಬಹಳಷ್ಟು ಬೇಡಿಕೆ ಇತ್ತು. ರೇಷ್ಮೆ ಉತ್ಪಾದನೆಯಲ್ಲಿ ಪ್ರಾಬಲ್ಯ ಮೆರೆದಿದ್ದ ಉಪವಿಭಾಗದ ತಾಲೂಕುಗಳ ರೈತರ ಬದುಕನ್ನು ಸತತ ಬರಗಾಲ ನುಂಗಿ ಹಾಕಿತು. ನಂತರ ಹಂತಹಂತವಾಗಿ ಬೆಳೆ ಕಣ್ಮರೆಯಾಗುತ್ತಾ ಬಂತು. ರೇಷ್ಮೆ ಉದ್ದಿಮೆಯಲ್ಲಿ ಯುವ ಜನತೆಗೆ ವಿಶೇಷ ತರಬೇತಿ ನೀಡಲು ಆರಂಭವಾದ ರೇಷ್ಮೆ ಕೇಂದ್ರದ ಉದ್ದೇಶವೇ ಈಡೇರದಿರುವುದು ವಿಪರ್ಯಾಸ.

ಕಳ್ಳರ ಪಾಲಾಗಿವೆ ಉಪಕರಣಗಳು: ಬಿತ್ತನೆ ಕೋಠಿಯಲ್ಲಿದ್ದ ದುಬಾರಿ ಬೆಲೆಯ ಯಂತ್ರಗಳು ಕಳ್ಳರ ಪಾಲಾಗಿವೆ. ಇಲಾಖೆ ಇದರ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿ ಕೈ ತೊಳೆದುಕೊಂಡಿದೆ. ಇನ್ನು ರೇಷ್ಮೆಗೂಡಿನ ವಾರುಕಟ್ಟೆ ಕಚೇರಿಯ ಬಾಗಿಲನ್ನು ಕಿಡಿಗೇಡಿಗಳು ಶಾಶ್ವತವಾಗಿ ತೆರೆದಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ವಾರ್ಪಟ್ಟಿದೆ. ಇನ್ನಾದರೂ ಸರ್ಕಾರ ಇಲಾಖೆಯನ್ನು ಈ ಭಾಗಕ್ಕೆ ಸ್ಥಳಾಂತರಿಸಿದರೆ ರೈತರಿಗೆ ಪ್ರಯೋಜನವಾಗಲಿದೆ. ಇಲ್ಲದಿದ್ದರೆ ವಿದ್ಯಾರ್ಥಿನಿಲಯ ಅಥವಾ ಇತರ ಇಲಾಖೆಗಳಿಗೆ ಬಳಸಿಕೊಳ್ಳಬಹುದು.

ಪಟ್ಟಣದ ಹಿಂದುಪುರ ರಸ್ತೆಯಲ್ಲಿ ಶಿಥಿಲಗೊಂಡಿರುವ ಕಟ್ಟಡಕ್ಕೆ ರೇಷ್ಮೆ ಇಲಾಖೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಕಟ್ಟಡದ ಕಿಟಕಿ ಬಾಗಿಲು ಶಿಥಿಲಗೊಂಡಿದ್ದು, ದುರಸ್ತಿ ಮಾಡಲು ಅನುದಾನ ಕೋರಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದುರಸ್ತಿಗೊಳಿಸಿದ ನಂತರ ಸ್ಥಳಾಂತರಕ್ಕೆ ನಮ್ಮ ಅಭ್ಯಂತರವಿಲ್ಲ. ಸಿ.ಇ.ನಾಗರಾಜು ರೇಷ್ಮೆ ಸಹಾಯಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net