ಆದಿವಾಸಿಗಳ ಹಕ್ಕು ಕಸಿಯುವ ಕಾರ್ಯ ಅವ್ಯಾಹತ

h9-SDPI
Published on

ಹುಬ್ಬಳ್ಳಿ: ಅರಣ್ಯ ನಾಶಗೊಳಿಸಿ ರೆಸಾರ್ಟ್, ಕಾಫಿ ಎಸ್ಟೇಟ್ ಮಾಡಲು ಈ ದೇಶದ ಕಾನೂನು ಅವಕಾಶ ನೀಡುತ್ತದೆ. ಆದರೆ, ಆದಿವಾಸಿಗಳನ್ನು ಬದುಕಲು ಬಿಡದೆ ಅವರ ಹಕ್ಕುಗಳ ಕಸಿಯುವ ಕಾರ್ಯ ನಡೆಸಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್​ಡಿಪಿಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ ಪ್ರಸಾದ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಬುಡಕಟ್ಟು ಜನರ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಎಸ್​ಡಿಪಿಐ ವತಿಯಿಂದ ಇಲ್ಲಿನ ಜೆ.ಸಿ. ನಗರದ ಅಕ್ಕನ ಬಳಗ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಆಧುನಿಕ ಭಾರತದಲ್ಲಿ ಆದಿವಾಸಿಗಳ ಬದುಕು ಮತ್ತು ಭವಿಷ್ಯದ ಸವಾಲುಗಳ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ವಿಷಯ ಮಂಡಿಸಿದರು.

ಆದಿವಾಸಿಗಳು ಈ ದೇಶದ ಮೂಲ ನಿವಾಸಿಗಳು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.8ರಷ್ಟು ಆದಿವಾಸಿಗಳಿದ್ದಾರೆ. ಅವರೆಲ್ಲರೂ ಕಷ್ಟದ ಜೀವನ ನಡೆಸುತ್ತಿದ್ದಾರೆ. ಅರಣ್ಯ ಕಾಯ್ದೆಗಳು ಕಾಡಿನಲ್ಲಿ ಆದಿವಾಸಿಗಳನ್ನು ಬದುಕಲು ಬಿಡುತ್ತಿಲ್ಲ. ಅರಣ್ಯವನ್ನೇ ತಾಯಿ ಎಂದು ತಿಳಿದವರ ನಿದ್ದೆಯನ್ನು ಈ ದೇಶದ ಕಾನೂನು ಕಸಿಯುತ್ತಿದೆ. ಆದಿವಾಸಿಗಳಿಂದಲೇ ಈ ದೇಶದಲ್ಲಿ ಗುಡ್ಡ, ಕಾಡು ಉಳಿದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗರಿಕ ತಿದ್ದುಪಡಿ ಕಾಯ್ದೆಯಲ್ಲಿ ಈ ದೇಶದ ಮೂಲ ನಿವಾಸಿಗಳಾದ ಬುಡಕಟ್ಟು ಜನಾಂಗದವರ ಬಹುಪಾಲು ಹಕ್ಕುಗಳನ್ನು ಕಸಿಯಲಾಗಿದೆ. ಆದಿವಾಸಿಗಳಿಗೆ ಸರಿಯಾದ ವ್ಯವಸ್ಥೆ ಈವರೆಗೂ ದೊರೆತಿಲ್ಲ. ರಾಜ್ಯದಲ್ಲಿ 72 ಬುಡಕಟ್ಟು ಸಮುದಾಯಗಳು ಎಲ್ಲಿವೆ?. ಅವು ಏನು ಕೆಲಸ ಮಾಡುತ್ತಿವೆ? ಎಂಬ ಮಾಹಿತಿಯೇ ಸರ್ಕಾರದ ಬಳಿ ಇಲ್ಲ. ಅವರನ್ನು ಗುರುತಿಸಿ ಸೌಲಭ್ಯ ನೀಡಲು ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರಕ್ಕೆ ಆದಿವಾಸಿಗಳನ್ನು ಭೇಟಿಯಾಗಿ ಸೌಲಭ್ಯ ನೀಡುವಂತೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ.ಯನ್ನು ರಾಜಕೀಯ ಲಾಭದ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಎಸ್​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಧಾರವಾಡ ಜಿಲ್ಲಾ ಉಪಾಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿದರು.

ಪ್ರಮುಖರಾದ ಯಮನಪ್ಪ ಗುಣದಾಳ, ಗಫೂರ್ ಅಹ್ಮದ್ ಕುರಟ್ಟಿ, ರಾಮಯ್ಯ ಡೋಕ್ಕನವರ, ಹನುಮಂತಪ್ಪ ಪುಲಾವಿ, ರಾಮಕುಮಾರ ಮಹಾಂತ, ಮಾರುತಿ ಕಟ್ಟಿಮನಿ ಇತರರು ಇದ್ದರು.

ಕೈಗೊಂಡ ನಿರ್ಣಯಗಳು: ಆದಿವಾಸಿಗಳ ಮೇಲಿನ ದೌರ್ಜನ್ಯ ತಡೆಯಲು ಕಾನೂನುಗಳಿದ್ದು, ಅಧಿಕಾರಿಗಳು ಹೊಣೆಗಾರಿಕೆ ನಿಭಾಯಿಸುವಲ್ಲಿ ಎಡವುತ್ತಿದ್ದಾರೆ. ಹೊಣೆಗಾರಿಕೆ ನಿಗದಿ ಮಾಡುವ ವ್ಯವಸ್ಥೆ ಜಾರಿ ಮಾಡಬೇಕು. ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ 50 ವರ್ಷಗಳಿಂದ ನಿರಾಶ್ರಿತರಂತೆ ಬದುಕುತ್ತಿರುವ 110 ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಬೇಕು. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಹರಣ ಶಿಕಾರಿ ಬುಡಕಟ್ಟು ಜನಾಂಗದ ಸ್ಥಿತಿ ಅರ್ಥ ಮಾಡಿಕೊಳ್ಳಲು ಸಮಗ್ರ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ನೀಡಬೇಕು. ಆದಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿ ಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net