ಕರೊನಾ ಸೋಂಕು ಭೀತಿಯಿಂದ ಖಿನ್ನತೆ: ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಎರಡು ಪ್ರಕರಣ | ವಶಕ್ಕೆ ಪಡೆದ ಖಾಕಿಗಳು

coorona virus 4 mar 20
Published on

ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಹರಡುವ ಭೀತಿ ಜನರನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿದೆ. ‘ಮಾದಕ ವ್ಯಸನಿ ಯುವಕ ಹಾಗೂ ಪೇಂಟರ್ ತಮಗೆ ಕರೊನಾ ಬಂದಿದೆ ಎಂದು ಹೇಳಿಕೊಂಡು ಓಡಾಡಿದ ಎರಡು ಪ್ರಕರಣ ನಗರದಲ್ಲಿ ಕಂಡುಬಂದಿವೆ.

ಪುಟ್ಟೇನಹಳ್ಳಿ ನಿವಾಸಿ ಗುರುಮೂರ್ತಿ (25) ಎಂಬಾತ ವಿಲ್ಸನ್ ಗಾರ್ಡನ್ ಠಾಣೆಗೆ ಹೋಗಿ ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆ ಕೇಳಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಯಶವಂತಪುರದ 1ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಯುವಕ, ‘ನನಗೆ ಕರೊನಾ ಬಂದಿದೆ. ಮುಟ್ಟಿದರೆ ನಿಮಗೂ ಹರಡುತ್ತದೆ’ ಎಂದು ಕೂಗಾಡುತ್ತಿದ್ದ. ಅಲ್ಲದೆ, ಗಸ್ತಿನಲ್ಲಿದ್ದ ಪೊಲೀಸರನ್ನೂ ಬೆದರಿಸಿದ್ದ. ಆತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಠಾಣೆಗೇ ಬಂದು ಹೆದರಿಸಿದ: ಗುರುಮೂರ್ತಿ ಎಂಬಾತ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ. ಈ ವೇಳೆ ವೈದ್ಯರು ಔಷಧ ಚೀಟಿ ಬರೆದುಕೊಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ, ಔಷಧ ಚೀಟಿಯನ್ನು ಗಮನಿಸಿ ಕರೊನಾ ವೈರಸ್ ಶೇ. 10 ಇದೆ ಎಂದು ಬರೆದಿದ್ದಾರೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ಆತಂಕಗೊಂಡು ಶುಕ್ರವಾರ (ಮಾ.27) ಮಧ್ಯಾಹ್ನ 2.30ರಲ್ಲಿ ಠಾಣೆಗೆ ಬಳಿ ಬಂದು, ತನಗೆ ಕರೊನಾ ಇದೆ. ವೈದ್ಯರಿಂದ ಚಿಕಿತ್ಸೆ ಕೊಡಿಸುವಂತೆ ಕೇಳಿದ್ದ. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿಯವರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕರೊನಾ ಸೋಂಕು ಕಂಡು ಬಂದಿಲ್ಲ. ಅಲ್ಲದೆ, ಈತನ ಬಳಿಯಿದ್ದ ವೈದ್ಯರ ಚೀಟಿಯನ್ನು ಗಮನಿಸಿದಾಗ ಯಾರೋ ಅಪರಿಚಿತ ಭಯ ಬೀಳಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯದ ಅಮಲಿನಲ್ಲಿ ಕರೊನಾ ಕೂಗಾಟ!: ನನಗೆ ಕರೊನಾ ಇದೆ. ಮುಟ್ಟಿದ್ರೆ ನಿಮಗೂ ಬರುತ್ತೆ ಎಂದು ಪೊಲೀಸರನ್ನೇ ಬೆದರಿಸಿ ಅಸ್ವಸ್ಥನಂತೆ ವರ್ತಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಯಶವಂತಪುರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಕರೊನಾ ವೈರಸ್ ಹರಡುವಿಕೆ ತಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. 1ನೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಯುವಕ, ನನಗೂ ಕರೊನಾ ಇದೆ. ಧಮ್ಮಿದ್ರೆ ನನ್ನನ್ನು ಮುಟ್ಟಿ ಎಂದು ಕೂಗಾಡಿದ್ದ. ಪೊಲೀಸರು ಹತ್ತಿರ ಹೋದಾಗ, ಹತ್ತಿರ ಬರಬೇಡಿ. ಮುಟ್ಟಬೇಡಿ. ನಿಮಗೂ ಕರೊನಾ ಬರುತ್ತೆ ಎಂದು ಹೆದರಿಸಿದ್ದಾನೆ. ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಡ್ರಗ್ಸ್ ಸೇವಿಸಿದ್ದ ಸಂಗತಿ ಗೊತ್ತಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net