ಆಧುನೀಕತೆಯಲ್ಲಿ ಖಿನ್ನತೆಗೆ ಒಳಗಾಗುತ್ತಿರುವ ಮಕ್ಕಳು

20
Published on

ಮೈಸೂರು: ನಾಲ್ಕು ಗೋಡೆಗಳ ನಡುವೆ ಶಾಲಾ ಕೊಠಡಿಯಲ್ಲಿ ಬಂಧಿಯಾಗಿ ಖಿನ್ನತೆಗೆ ಒಳಗಾಗುವ ಮಕ್ಕಳಿಗೆ ಶಾಲೆಯಿಂದಾಚೆಗಿನ ಜಗತ್ತನ್ನು ಪರಿಚಯಿಸುವ ಚಿಣ್ಣರ ಚಿತ್ತಾರಗಳಂತಹ ಬೇಸಿಗೆ ಶಿಬಿರಗಳು ಕ್ರಿಯಾಶೀಲತೆ ತಂದುಕೊಡುತ್ತವೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಕನಕದಾಸನಗರದ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಆವರಣದಲ್ಲಿ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಡಾ.ನಾ.ಸು.ಹರ್ಡಿಕರ್ ಭಾರತ ಸೇವಾದಳ ಪ್ರೌಢಶಾಲೆಯಿಂದ ಬುಧವಾರ ಆಯೋಜಿಸಿದ್ದ ಚಿಣ್ಣರ ಚಿತ್ತಾರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಶಿಕ್ಷಣ, ವಿಷಯ, ವಿಚಾರ, ಆಟ, ಪಾಠ, ಸರ್ಕಾರದ ನೀತಿ, ನಿಯಮ ಹಿಂದಿನಂತಿಲ್ಲ. ಪಾಲಕರೂ ಒಳಗೊಂಡಂತೆ ಶಿಕ್ಷಕರ ಮನೋಸ್ಥಿತಿ ಕೂಡ ಬದಲಾಗಿದೆ. ಆಧುನಿಕ ಭರಾಟೆಯ ವೇಗದ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಮೇಲೆ ನಿರ್ಧರಿಸುವಂತಾಗಿದೆ. ಹಾಗಾಗಿ, ವಿಶೇಷವಾಗಿ ಇಂದಿನ ಬಹುತೇಕ ನಗರದ ಮಕ್ಕಳು ಮತ್ತು ಅವರ ಪಾಲಕರಿಗೆ ಅಂಕವೇ ಮುಖ್ಯ ಎನ್ನುವಂತಾಗಿದ್ದು, ಬೇರ್ಲೆ ಗೌಣ್ಯವಾಗಿದೆ ಎಂದು ವಿಷಾದಿಸಿದರು.
ನಮ್ಮ ಸುತ್ತಲೂ ಇರುವ ಪ್ರಕೃತಿ ಸಂಪನ್ಮೂಲದ ಅರಿವಿಲ್ಲ. ಕನಿಷ್ಠ ಅವರು ತಿನ್ನುವ ಆಹಾರದ ವಸ್ತುಗಳು ಹೇಗೆ ಬರುತ್ತವೆ ಅರಿವಿಲ್ಲ. ಹೀಗಾಗಿ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಸನದ ಪ್ರಬುದ್ಧತೆಗಾಗಿ ಪ್ರತಿಯೊಂದು ವಿಷಯಗಳ ಅವಶ್ಯಕತೆ ಇದೆ. ಅದು ಕೇವಲ ಒಂದು ಶಾಲಾ ತರಗತಿಯಲ್ಲಿ ಖಂಡಿತ ಸಿಗಲಾರದು ಎಂದರು.
ಇನ್ನು ನಮ್ಮ ಜನ ಮನ, ಆಚಾರ-ವಿಚಾರ, ಸಂಬಂಧ ಅನುಬಂಧ, ಹಬ್ಬ ಹರಿದಿನ, ಸಮೃದ್ಧಿ ಸಾಮರಸ್ಯ, ನಮ್ಮ ನೆಲದ ತಾಯಿಬೇರು ಜನಪದ ಸಾಹಿತ್ಯ ಹಾಗೂ ಅದರ ವಿವಿಧ ಪ್ರಕಾರಗಳು ಹೀಗೆ ಯಾವುದೂ ಯಾವ ಮಕ್ಕಳ ಜ್ಞಾನ ಕೋಶದಲ್ಲೂ ಕಾಣದಾಗುತ್ತಿದೆ.
ಪಾಲಕರು ತಮ್ಮ ಮಕ್ಕಳ ಪಾದ ಮಣ್ಣಿಗೆ ತಾಗದಂತೆ ಬೆಳೆಸುತ್ತಿದ್ದಾರೆ. ವಾಸ್ತವವಾಗಿ ವೈಜ್ಞಾನಿಕವಾಗಿ ಮಣ್ಣಿನಲ್ಲಿ ಮಕ್ಕಳನ್ನು ಸಂರಕ್ಷಿಸಬಲ್ಲ ರೋಗ ನಿರೋಧಕ ಶಕ್ತಿ ಇದೆ ಎಂಬುದರ ಅರಿವಿಲ್ಲದೆ ಬಾಲ್ಯದಿಂದಲೇ ತಮ್ಮ ಮಕ್ಕಳನ್ನು ಮಣ್ಣಿನೊಡನಾಟ, ಕೆರೆ, ಕಟ್ಟೆ, ನೀರು, ಪರಿಸರ ಸೇರಿದಂತೆ ಒಟ್ಟಾರೆ ಪ್ರಕೃತಿಯಿಂದಲೇ ದೂರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಮುಕ್ತವಾಗಿ ವಿಷಯ ತಜ್ಞರಿಂದ ಎಲ್ಲ ವಿಚಾರಗಳನ್ನು, ವಿಷಯಗಳನ್ನು ಚರ್ಚಿಸಿ ತಿಳಿದುಕೊಂಡು ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಂಡು ಹಕ್ಕಿಯಂತೆ ಹಾರಾಡುತ್ತಾ ಕೆಲವು ದಿನಗಳಾದರೂ ಖುಷಿಪಡುವಂತೆ ಮಾಡುವ ಚಿಣ್ಣರ ಬೇಸಿಗೆ ಶಿಬಿರಗಳು ಮಕ್ಕಳ ಕ್ರಿಯಾಶೀಲತೆಗೆ ಸಹಕಾರಿ ಆಗಬಲ್ಲವು ಎಂದು ಹೇಳಿದರು.
ರಂಗ ನಿರ್ದೇಶಕ ಮೈಮ್ ರಮೇಶ್ ಮಾತನಾಡಿ, ನಮ್ಮಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿ ಹೋಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವುದೇ ಒಂದು ಸವಾಲಿನ ಕೆಲಸವಾಗಿದೆ. ಒಳಿತಿಗಿಂತ ಹೆಚ್ಚಾಗಿ ಕೆಟ್ಟದ್ದೇ ತುಂಬಿರುವ ನಮ್ಮ ಸಮಾಜದಲ್ಲಿ ಪಾಲಕರು ಮಕ್ಕಳನ್ನು ಬಹಳ ಜಾಗ್ರತೆಯಿಂದ ೆಳೆಸಬೇಕಾಗಿದೆ. ಅಷ್ಟೇ ಜಾಗರೂಕತೆಯಿಂದ ನೋಡಿ ಕೊಳ್ಳಬೇಕಾಗಿದೆ. ಇಂದಿನ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಬೇಕಾದರೆ ಗಾಂಧಿಯ ಆತ್ಮಕಥೆಯನ್ನು ಓದಿದರೆ ಸಾಕು, ಅಂಬೇಡ್ಕರ್ ಬದುಕನ್ನು ಅರಿತರೆ ಸಾಕು, ಬಸವಣ್ಣನ ಜೀವನವನ್ನು ತಿಳಿದರೆ ಸಾಕು, ಒಳಿತೆಲ್ಲವೂ ಒಮ್ಮೆಗೇ ಸಿಗುತ್ತದೆ. ಹಾಗಾಗಿ ಮಕ್ಕಳ ಮೇಲೆ ಎಲ್ಲ ಮಹನೀಯರು, ಮಹಾತ್ಮರ ವಿಚಾರ ಕ್ರಾಂತಿಯ ಬೆಳಕನ್ನು ಚೆಲ್ಲಬೇಕೆಂದು ಪಾಲಕರು ಮತ್ತು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಪ್ರಜ್ಞಾ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ದರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ಕಾರ್ಯದರ್ಶಿ ಬೀರಿಹುಂಡಿ ಬಸವಣ್ಣ, ಭಾರತ ಸೇವಾದಳದ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಡಿ. ಆರ್.ಶೇಷಾಚಲ, ವಲಯ ಸಂಘಟಕ ಕೆ.ಈರಯ್ಯ, ಪ್ರಜ್ಞಾ ಶೈಕ್ಷಣಿಕ ಟ್ರಸ್ಟ್ನ ಖಜಾಂಚಿಯಾದ ಉಪನ್ಯಾಸಕ ಡಾ.ತಿರುಮಲೇಶ್, ಸಂಗೀತ ಶಿಕ್ಷಕ ನವೀನ್, ಮಹಾದೇವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net