

ನರಗುಂದ: ತಂದೆ ಸಾವಿನಿಂದ ಖಿನ್ನತೆಗೊಳಗಾಗಿದ್ದ ಗ್ರಾಪಂ ನೌಕರನೊಬ್ಬ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸುರಕೋಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸುರಕೋಡ ಗ್ರಾಮ ಪಂಚಾಯಿತಿ ಸಿಪಾಯಿ ರವೀಂದ್ರಗೌಡ ಶೇಖರಗೌಡ ಕಲ್ಲನಗೌಡ್ರ (32) ಆತ್ಮಹತ್ಯೆ ಮಾಡಿಕೊಂಡವರು.
ರವೀಂದ್ರಗೌಡ ಅವರ ತಂದೆ ಶೇಖರಗೌಡ ಕಲ್ಲನಗೌಡ್ರ ಹದಿನೈದು ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ ರವೀಂದ್ರಗೌಡ ಖಿನ್ನತೆಯಿಂದ ಬಳಲುತ್ತಿದ್ದ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿಟ್ಟಿದ್ದ ನುಶಿಗೆ ಬಳಸುವ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಆತನ ಕುಟುಂಬಸ್ಥರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 7.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.