

ರಾಯಚೂರು ನಗರ ಸೇರಿ ಜಿಲ್ಲಾದ್ಯಂತ ಠೇವಣಿದಾರರಿಗೆ ಮೆ.ದರ್ವೇಶ್ ಗ್ರೂಪ್‌ನವರು ಹಣ ಮರಳಿಸದೇ ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಸಲ್ಲಿಸಿದ ತನಿಖಾ ವರದಿಯಾಧರಿಸಿ ಸರ್ಕಾರವು ಠೇವಣಿದಾರರ ಹಿತ ಕಾಯಲು ಮುಂದಾಗಿದೆ. ಅಂತೆಯೇ ವಂಚನೆ ಮಾಡಿದ್ದ ದರ್ವೇಶ್ ಗ್ರೂಪ್‌ನ ಚರ ಹಾಗೂ ಸ್ಥಿರಾಸ್ತಿ ಮುಟ್ಟುಗೋಲು ಹಾಕಲು ಅಗತ್ಯ ಕ್ರಮಕ್ಕೆ ಅಧಿಸೂಚನೆ ಹೊರಡಿಸಿದೆ.
ಕಳೆದ ವರ್ಷ ನಗರದಲ್ಲಿ ಮೆ.ದರ್ವೇಶ್ ಗ್ರೂಪ್ ಹೆಸರಿನಲ್ಲಿ ಸಂಸ್ಥೆಯೊಂದು ಸಾರ್ವಜನಿಕರೊಂದಿಗೆ ಹಣಕಾಸು ವಹಿವಾಟು ನಡೆಸಿತ್ತು. ಜನರಿಂದ ಹೆಚ್ಚಿನ ಬಡ್ಡಿ ನೀಡುವುದಾಗಿ ಠೇವಣಿ ಸಂಗ್ರಹಿಸಿ ಆನಂತರದಲ್ಲಿ ಠೇವಣಿದಾರರಿಗೆ ಅವಧಿ ತೀರಿದ ನಂತರ ಅಥವಾ ಅವರು ಬೇಡಿಕೆಯಿರಿಸಿದಾಗ ಹಣ ಮರಳಿಸಿರಲಿಲ್ಲ. ಅದರಿಂದ ರೊಚ್ಚಿಗೆದ್ದ ಠೇವಣಿದಾರರು ಸಂಸ್ಥೆಯ ಕಚೇರಿ ಮೇಲೆ ದಾಳಿ ಮಾಡಿ ಆಸ್ತಿಗೆ ಧಕ್ಕೆಯುಂಟು ಮಾಡಿದ್ದರು.
ಈ ಪ್ರಕರಣ ಗಂಭೀರ ಸ್ವರೂಪ ತಾಳಿದ್ದರಿಂದ ಎಚ್ಚೆತ್ತಿದ್ದ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು. ಆನಂತರ ಈ ಪ್ರಕರಣದಲ್ಲಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ 5 ಜನರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಅದೇ ವೇಳೆ ತನಿಖಾ ವರದಿಯನ್ನು ಸರ್ಕಾರಕ್ಕೆ ಸಿಐಡಿ ಪೊಲೀಸರು ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಜಾರಿಯಲ್ಲಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರವು ಠೇವಣಿದಾರರ ಹಿತ ಕಾಯಲು ಇದೀಗ ಮುಂದಾಗಿದೆ.
ಅದರಂತೆ ಸರ್ಕಾರವು ಜೂ.23ರಂದು ಅಧಿಸೂಚನೆ ಹೊರಡಿಸಿದೆ. ಕಂದಾಯ ಇಲಾಖೆಯ ಉಪಕಾರ್ಯದರ್ಶಿ ಅನ್ವರ್ ಬಾಷಾ (ಭೂಮಾಪನ ಮತ್ತು ವಿಶೇಷ ಕೋಶ)ಅವರು ರಾಜ್ಯಪಾಲರ ಆದೇಶಾನುಸಾರ ಶ ಹೊರಡಿಸಿದ್ದು ಅಧಿಸೂಚನೆ ಜಾರಿಗೊಳಿಸಿ, ಸಿಐಡಿ ತನಿಖಾ ವರದಿಯಲ್ಲಿ ಠೇವಣಿದಾರರಿಗೆ ಮೆ.ದರ್ವೇಶ ಗ್ರೂಪ್ ಸಂಸ್ಥೆಯಿಂದ ವಂಚನೆಯಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004(2005ರ ಕರ್ನಾಟಕ ಅಧಿನಿಯಮ 30)ಈ 3ನೇ ಪ್ರಕರಣದ(2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರ ಚಲಾಯಿಸುತ್ತಿರುವುದಾಗಿ ತಿಳಿಸಿದ್ದಾರೆ.
ಅದರಂತೆ ಮೆ.ದರ್ವೇಶ್ ಗ್ರೂಪ್ ಗೆ ಸೇರಿದ ಎನ್ನಲಾದ ಸ್ಥಿರ ಮತ್ತು ಚರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅವಶ್ಯಕ ಎಂದು ಮನಗಂಡಿರುವುದಾಗಿ ತಿಳಿಸಿ ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ನಾನಾ ಕಡೆ ದರ್ವೇಶ್ ಸಂಸ್ಥೆ ಮತ್ತು ಪಾಲುದಾದರು, ನಿರ್ದೇಶಕರು, ಪ್ರವರ್ತ್ತಕರು, ವ್ಯವಸ್ಥಾಪಕರಿಗೆ ಸೇರಿದ ಎಲ್ಲ ಚರ ಹಾಗೂ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಧಿಸೂಚನೆಯಲ್ಲಿ ಒಟ್ಟು 21 ಕಡೆಯಿರುವ ಜಮೀನು, ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು ರೂ.8,26,12,001, ಹತ್ತು ವಿವಿಧ ಕಾರುಗಳು, ರೊಲೆಕ್ಸ್ ವಾಚ್ ಜಪ್ತಿ ಮಾಡುತ್ತಿರುವುದಾಗಿ ತಿಳಿಸಲಾಗಿದೆ.