

ಬೇಲೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಗಲ್ಲಿಗೇರಿಸಬೇಕು ಅಥವಾ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರವೇ(ಪ್ರವೀಣ್‌ಶೆಟ್ಟಿ)ಬಣದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಪ್ರತಿಯೊಬ್ಬ ಭಾರತೀಯರು ದೇಶದ ಸಾರ್ವಭೌಮತ್ವಕ್ಕೆ ಬದ್ಧನಾಗಿರಬೇಕು. ಆದರೆ ನಮ್ಮ ದೇಶದಲ್ಲಿ ಜೀವನ ನಡೆಸುತ್ತಿರುವ ಅಮೂಲ್ಯ, ನಮ್ಮ ದೇಶದ ಪರವಾಗಿ ಮಾತನಾಡದೆ, ಪಾಕಿಸ್ತಾನ ಜಿಂದಾಬಾದ್ ಎಂದಿರುವುದು ದೇಶದ್ರೋಹದ ಕೆಲಸ. ಆದ್ದರಿಂದ ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಇಲ್ಲವೇ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಕರವೇ ತಾಲೂಕು ಗೌರವಾಧ್ಯಕ್ಷ ಕುಬೇರ, ಪ್ರ.ಕಾರ್ಯದರ್ಶಿ ಜಯಪ್ರಕಾಶ್, ಯುವ ಘಟಕದ ಅಧ್ಯಕ್ಷ ಸತೀಶ್, ಕುಮಾರ್, ಮುಖಂಡರಾದ ದೀಪು, ಮಣಿ, ಪ್ರವೀಣ್, ಪ್ರಸಾದ್, ಮಂಜುನಾಥ್, ನವೀನ್ ಇತರರಿದ್ದರು.