ಜಿಗಳೂರು ಕೆರೆಯಲ್ಲಿ ಸಂಗ್ರಹ ಕುಸಿತ, ಗಜೇಂದ್ರಗಡಕ್ಕೆನೀರು ಪೂರೈಕೆ ಸ್ಥಗಿತ

Drinking water problem Shirakola
Published on

ಗಜೇಂದ್ರಗಡ: ತಾಲೂಕಿನ ಜನತೆಗೆ ಕುಡಿಯುವ ನೀರು ಒದಗಿಸುವಲ್ಲಿ ನಿರ್ಲಕ್ಷೃ ಮಾಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ತಾಲೂಕು ಮಟ್ಟದ ಬರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಜೇಂದ್ರಗಡ ಪಟ್ಟಣಕ್ಕೆ 8 ದಿನಗಳಿಂದ ಜಿಗಳೂರು ಕೆರೆ ನೀರು ಸ್ಥಗಿತವಾಗಿದೆ ಎಂಬ ಅಧಿಕಾರಿಗಳ ಹೇಳಿಕೆಗೆ ಗರಂ ಆದ ಶಾಸಕರು, ಕೆರೆಯಲ್ಲಿ ನೀರು ಕಡಿಮೆ ಆಗಿದೆ ನಿಜ. ಆದರೆ ಮೋಟಾರ್ ಪಂಪ್‌ಸೆಟ್ ಅನ್ನು 10 ಅಡಿ ಕೆಳಗಿಸಿದರೆ ಇಳಿಸಿದರೆ ಇನ್ನೂ ಎಂಟು ದಿನ ಗಜೇಂದ್ರಗಡ ಪಟ್ಟಣಕ್ಕೆ ನೀರು ಸರಬರಾಜು ಆಗುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ನೆಪಗಳನ್ನು ಹೇಳುತ್ತಾ ಕುಳಿತರೆ ಸಹಿಸುವುದಿಲ್ಲ ಎಂದು ಹರಿಹಾಯ್ದರು.
ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಹಾಗೂ ಗೋಶಾಲೆ ಆರಂಭಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಿದ ತಾಲೂಕಿನ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಎಷ್ಟು ಫಲಾನುಭವಿಗಳಿಗೆ ಪರಿಹಾರ ಸಿಕ್ಕಿದೆ. ಇನ್ನೂ ಎಷ್ಟು ಜನರಿಗೆ ಸಿಗಬೇಕು ಎಂಬುದು ತಿಳಿಯುತ್ತದೆ ಎಂದರು.
ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದಾಗ ರೈತರು ಪರಿಹಾರದಿಂದ ವಂಚಿತರಾಗಬಾರದು. ಕೃಷಿ ಇಲಾಖೆ ಅಧಿಕಾರಿಗಳು ಎಲ್ಲ ರೈತರ ಎಫ್‌ಐಡಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಲಕ್ಕಲಕಟ್ಟಿ ಪಿಡಿಒ ಮಂಜುನಾಥ ಪಾಟೀಲ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಕೊಳವೆಬಾವಿಗಳಿಗೆ ಇಳಿಸಿದ ಮೋಟಾರು ಹಾಗೂ ಕೇಬಲ್‌ಗಳು ಕಳ್ಳತನ ಆಗುತ್ತಿವೆ. ಈಬಗ್ಗೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಕಳ್ಳತನದ ಘಟನೆಗಳು ನಿಲ್ಲುತ್ತಿಲ್ಲ ಎಂದು ಶಾಸಕರ ಗಮನ ಸೆಳೆದರು.
ಈ ಬಗ್ಗೆ ಶಾಸಕರಿಗೆ ಪಿಎಸ್‌ಐ ಸೋಮನಗೌಡ ಗೌಡ್ರ ಉತ್ತರಿಸಿ ಆಂತರಿಕ ವಿಷಯ ಬೇರೆ ಇದೆ. ವೈಯಕ್ತಿಕವಾಗಿ ಭೇಟಿಯಾಗಿ ಹೇಳುತ್ತೇನೆ ಎಂದಾಗ ಕೆಲ ಅಧಿಕಾರಿಗಳಿಗೆ ಆಶ್ಚರ್ಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net