ನಗರೀಕರಣದಿಂದ ಅರಣ್ಯ ಪ್ರದೇಶ ಕ್ಷೀಣ: ಪ್ರೊ.ಬಿ.ಸದಾಶಿವೇಗೌಡ ಬೇಸರ

14
Published on

ಮೈಸೂರು: ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಬುಧವಾರ 53ನೇ ವಿಶ್ವ ಪರಿಸರ ದಿನ ಆಚರಿಸಲಾಯಿತು. ಐಕ್ಯೂಎಸಿ ವಿವಿಸಿಇ, ಎನ್‌ಎಸ್‌ಎಸ್ ವಿವಿಸಿಇ, ಐಜಿಎಸ್ ಮೈಸೂರು ಚಾಪ್ಟರ್, ಎಸಿಸಿಇ (ಐ) ಮೈಸೂರು ಕೇಂದ್ರ, ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಮತ್ತು ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲ ಪ್ರೊ.ಬಿ.ಸದಾಶಿವೇಗೌಡ ಮಾತನಾಡಿ, ನಗರಗಳಲ್ಲಿ ಮಾಲಿನ್ಯದ ಹೆಚ್ಚಳ, ನಗರ ಪ್ರದೇಶಗಳಲ್ಲಿ ತಾಪಮಾನ ಏರಿಕೆ ಮತ್ತು ಸರಿಯಾದ ವಿಲೇವಾರಿ ಇಲ್ಲದೆ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅನಿರೀಕ್ಷಿತ ಮಳೆ, ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ, ಇತರ ಕಾರಣದಿಂದ ಪರಿಸರಕ್ಕೆ ಹಾನಿ ಸಂಭವಿಸುತ್ತಿದೆ ಎಂದು ಹೇಳಿದರು.
ನಗರ ಪ್ರದೇಶಗಳು ಹೆಚ್ಚಾದಂತೆ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿವೆ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ಹಸಿರು ಪರಿಸರವನ್ನು ನೋಡುವುದೇ ಕಷ್ಟಕರವಾಗುತ್ತಿದೆ. ಈ ಅಂಶಗಳನ್ನು ಪರಿಗಣಿಸಿ, ವಿಶ್ವಸಂಸ್ಥೆ ಜೂನ್ 5, 1972ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಪರಿಸರ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಹಾರ ಕ್ರಮಗಳನ್ನು ಹುಡುಕುವುದರ ಬಗ್ಗೆ ಚರ್ಚಿಸಲು ಸಮಾವೇಶವನ್ನು ಆಯೋಜಿಸಿ, ಆ ಸಭೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು ಎಂದು ವಿವರಿಸಿದರು.
ಆರ್‌ಎಫ್‌ಒ ಧನ್ಯಾಶ್ರೀ ಮಾತನಾಡಿ, ಮರಗಳನ್ನು ನೆಡುವುದು ಮತ್ತು ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಮನುಕುಲಕ್ಕೇ ಅಲ್ಲದೆ ಪ್ರಾಣಿ ಸಂಕುಲಕ್ಕೂ ಪರಿಸರ ಆಶ್ರಯ ನೀಡುತ್ತವೆ. ಜತೆಗೆ ನಮಗೆ ಆಮ್ಲಜನಕ ನೀಡುವುದರ ಜತೆ ಆಹ್ಲಾದಕರ ವಾತಾವರಣ ನೀಡುತ್ತವೆ. ಹೀಗಾಗಿಯೇ ಸದಾ ಹಸಿರಿನಿಂದ ಕೂಡಿದ ಪ್ರವಾಸಿ ಸ್ಥಳಗಳಿಗೆ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ನಾವು ತಾಯಿ ಎಂದೇ ಕರೆಯುವ ಭೂಮಿಯನ್ನು ಹಸಿರು ಮತ್ತು ಸುಂದರವಾಗಿರುವಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
ವಿಜಯನಗರ ಐ ಸ್ಟೇಜ್‌ನಲ್ಲಿ ವಾಕಥಾನ್ ಆಯೋಜಿಸಲಾಗಿತ್ತು. ರೈಲ್ವೇ ಲೇಔಟ್ ಅನ್ನು ಭೂಮಾತೆಯನ್ನು ಉಳಿಸುವ ಉದ್ದೇಶದ ಫಲಕಗಳು ಮತ್ತು ಘೋಷಣೆಗಳಿಂದ ಅಲಂಕರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್, ಮಣಿಪಾಲ್ ಆಸ್ಪತ್ರೆಯ ಪ್ರಮೋದ್‌ಕುಂದರ್, ಉಪೇಂದ್ರ ಶೆಣೈ, ಎಸಿಸಿಇ (ಐ) ಅಧ್ಯಕ್ಷ ಡಾ. ಎಸ್. ರವಿರಾಜ್, ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ಪ್ರೊ.ಎಸ್.ಕೆ.ಪ್ರಸಾದ್, ಎಸಿಸಿಇ (ಐ) ಮೈಸೂರು ಕೇಂದ್ರದ ಕಾರ್ಯದರ್ಶಿ ಡಾ.ಜಿ.ಪಿ.ಚಂದ್ರಧರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net