ಕೆಪಿಎ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

14
Published on

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) 38ನೇ ತಂಡದ ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಅಬಕಾರಿ ಉಪಾಧೀಕ್ಷಕರು ಪ್ರಶಿಕ್ಷಣಾರ್ಥಿಗಳು ನಿರ್ಗಮನ ಪಥಸಂಚಲನವು ಶನಿವಾರ ಜರುಗಿತು. ಒಟ್ಟು 6 ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳು ತರಬೇತಿಯನ್ನು ಪೂರೈಸಿದ್ದು, ಇದರಲ್ಲಿ 4 ಪುರುಷ ಹಾಗೂ 2 ಮಹಿಳೆಯರು ಇದ್ದಾರೆ.
ಹೆಚ್ಚುವರಿ ಎಡಿಜಿಪಿ ಅಲೋಕ್‌ಕುಮಾರ್ ನಿರ್ಗಮನ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದರು. ಅಧಿಕಾರಿಗಳು ಕಾನೂನು ಬದ್ಧರಾಗಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ನಿಷ್ಪಕ್ಷಪಾತವಾಗಿ ಸಮಾಜ ಹಾಗೂ ದೇಶ ಸೇವೆಯನ್ನು ಮಾಡುವಂತೆ ಸಲಹೆ ನೀಡಿದರು.
ಪ್ರೊಬೇಷನರಿ ಡಿವೈಎಸ್ಪಿಗಳಾದ ವಿಜಯಕ್ರಾಂತಿ, ಗೀತಾ ಪಾಟೀಲ್, ಮರ್ತುಜಾ ಖಾದ್ರಿ ಹಾಗೂ ಅಬಕಾರಿ ಉಪಾಧೀಕ್ಷಕರಾದ ಬಿ. ಹರ್ಷರಾಜ, ಟಿ.ಕೀರ್ತಿಕುಮಾರ್, ಸಂತೋಷ್ ಮೋಡಗಿ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಕೆಪಿಎ ನಿರ್ದೇಶಕ ಲೋಕೇಶ್ ಭ ಜಗಲಾಸರ್, ಉಪನಿರ್ದೇಶಕ ನಿರಂಜನ್ ಎನ್.ರಾಜ್ ಅರಸ್ ಇತರರು ಇದ್ದರು.

ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ:
ಪ್ರೊ.ಡಿವೈಎಸ್ಪಿ(ಸಿವಿಲ್) ವಿಜಯಕ್ರಾಂತಿ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪಡೆದರು. ಮುಖ್ಯಮಂತ್ರಿಗಳು ಟ್ರೋಫಿ, ಖಡ್ಗ, ಡಿಜಿ ಮತ್ತು ಐಜಿಪಿ ಅವರ ಬೇಟನ್, ನಿವೃತ್ತ ಡಿಜಿ ಮತ್ತು ಐಜಿಪಿ ಗರುಡಾಚಾರ್ ನಗದು ಬಹುಮಾನದೊಂದಿಗೆ ಪ್ರೊ.ಡಿವೈಎಸ್ಪಿ(ಸಿವಿಲ್) ವಿಜಯಕ್ರಾಂತಿ ಅವರು ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಅಲ್ಲದೆ ಉತ್ತಮ ಫೈರಿಂಗ್ ಬಹುಮಾನ ವಿಜಯಕ್ರಾಂತಿ, ಹೊರಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ- ಡಿಜಿ ಮತ್ತು ಐಜಿಪಿ ಕಪ್ ಹಾಗೂ ಒಳಾಂಗಣ ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಫುಟ್‌ಬಾಲ್ ಗ್ರೌಂಡ್, ರನ್ನಿಂಗ್ ಟ್ರಾೃಕ್, ಪಿಟಿ ನರ್ಸರಿ, ಡ್ರಿಲ್ ನರ್ಸರಿ, ಮೆಗಾ ಕ್ಲಾಸ್ ರೂಮ್, ಯೋಗ ಹಾಲ್ ಹಾಗೂ ನವೀಕೃತ ನೇತ್ರಾವತಿ ಬ್ಲಾಕ್ ಅನ್ನು ಹೆಚ್ಚುವರಿ ಎಡಿಜಿಪಿ ಅಲೋಕ್ ಕುಮಾರ್ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net