ಮೈಸೂರು: ಅತ್ಯವಶ್ಯಕ ಸೇವೆಗಳ ವ್ಯಾಪ್ತಿಗೆ ಬರುವ ಇಲಾಖೆಗಳ ನೌಕರರು ಶುಕ್ರವಾರ ಲೋಕಸಭಾ ಕ್ಷೇತ್ರಕ್ಕೆ ಮತದಾನ ಮಾಡಿದರು.
ಸಿದ್ದಾರ್ಥ ಬಡಾವಣೆಯ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ 256 ಸಿಬ್ಬಂದಿ ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿಕೊಟ್ಟಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅತ್ಯವಶ್ಯಕ ಸೇವೆಗೆ ವಿವಿಧ ಇಲಾಖೆಗಳಿಂದ ಒಟ್ಟು 915 ಸಿಬ್ಬಂದಿ ನಿಯೋಜಿಸಲಾಗಿದ್ದು, ಅವರಿಗೆ ಸಾರ್ವತ್ರಿಕ ಮತದಾನದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ನೆಲಮಹಡಿ ಕೊಠಡಿ ಸಂಖ್ಯೆ 10ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಏ.19ರಂದು ಮತದಾನ ಮಾಡದೆ ಇರುವ ಸಿಬ್ಬಂದಿಗೆ 20 ಹಾಗೂ 21ರಂದು ಎರಡು ದಿನಗಳ ಕಾಲ ಅಂಚೆಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಸಿಬ್ಬಂದಿ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕೋರಿದ್ದಾರೆ.