

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಆಹಾರ ವಿತರಣೆಗಿರುವ ತಡೆ ನಿವಾರಿಸಿಕೊಳ್ಳುವುದರ ಜತೆಗೆ ವಿತರಣಾ ವ್ಯವಸ್ಥೆಯನ್ನು ಶೇ.100ರಷ್ಟಾಗುವಂತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್.ಅನಿಲ್ ಹೇಳಿದರು.
ಕಾಸರಗೋಡು ಅತಿಥಿ ಗೃಹದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಶೇ.85ರಷ್ಟು ಗ್ರಾಹಕರು ಬಿಪಿಎಲ್ ಕಾರ್ಡ್ದಾರರು ಈ ತಿಂಗಳ ಪಡಿತರ ಖರೀದಿಸಿದ್ದು, ಮುಂದಿನ ತಿಂಗಳ ವಿತರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಕೆ.ಸ್ಟಾಲ್ ಅಂಗಡಿಗಳ ಕಾರ್ಯಾಚರಣೆ ಬಲಪಡಿಸಲು ಸಾಧ್ಯವಾಗಬೇಕು. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಗೆ ಸೇರಿದ ಜನರು, ಕರಾವಳಿ ಪ್ರದೇಶದ ನಿವಾಸಿಗಳಿಗೆ ಆಹಾರ ಪದಾರ್ಥಗಳ ವಿತರಣೆ ಖಚಿತಪಡಿಸಿಕೊಳ್ಳಬೇಕು. ಯಾವುದೇ ಕುಟುಂಬಕ್ಕೂ ಆಹಾರ ಪದಾರ್ಥ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಬಾರದು. ಸಮಸ್ಯೆ ಎದುರಿಸುತ್ತಿರುವ ಪಡಿತರ ಅಂಗಡಿ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಪ್ಲೈಕೋ 13 ರೀತಿಯ ಉತ್ಪನ್ನಗಳನ್ನು ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲ ಮಳಿಗೆಗಳಿಗೆ ಪೂರೈಕೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಕೋಯಿಕ್ಕೋಡ್ ಪ್ರಾದೇಶಿಕ ಸರಬರಾಜು ಕಂಪನಿ ವ್ಯವಸ್ಥಾಪಕಿ ಶೆಲ್ಜಿ ಜಾರ್ಜ್, ಕಾಸರಗೋಡು ಜಿಲ್ಲಾ ಸರಬರಾಜು ಕಚೇರಿ ಹಿರಿಯ ಅಧೀಕ್ಷಕಿ ಆನ್ಸಿ ಐಸಾಕ್, ತಾಲೂಕು ಸರಬರಾಜು ಅಧಿಕಾರಿಗಳಾದ ಮಾಧವನ್ ಪಾಟಿ, ಬಿ.ಕೃಷ್ಣ ನಾಯ್ಕ, ಕಾಸರಗೋಡು ಸಪ್ಲೈಕೋ ಡಿಪೋ ಸಹಾಯಕ ವ್ಯವಸ್ಥಾಪಕ ಎಂ.ರವೀಂದ್ರನ್, ಕಾಞಂಗಾಡ್ ಸಪ್ಲೈಕೋ ಡಿಪೋ ಸಹಾಯಕ ವ್ಯವಸ್ಥಾಪಕ ಬಾಲಕೃಷ್ಣನ್ ಮತ್ತಿತರರಿದ್ದರು.