

ಬೆಂಗಳೂರು: ಬಜೆಟ್ನಲ್ಲಿ ಮಂಜೂರಾದ ಹಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ವಿಕಲಚೇತನರ ಸಬಲೀಕರಣ ಇಲಾಖೆ ಖರ್ಚು ಮಾಡದೆ ಕಂಜೂಸುತನ ಮಾಡಿರುವುದು ಬೆಳಕಿಗೆ ಬಂದಿದ್ದು, ಹಣಕಾಸು ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರ 2020-21ನೇ ಸಾಲಿನ ಬಜೆಟ್ ತಯಾರಿಯಲ್ಲಿದೆ. ಹಿಂದಿನ ವರ್ಷಗಳ ಅಂದಾಜುಗಳ ಮೇಲೆ ಕಣ್ಣಾಡಿಸಿ, ಇಲಾಖೆಗಳಿಂದ ಹೊಸ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತಿದೆ. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಣ್ಣ ಬಯಲಾಗಿದೆ.
ಪತ್ರದಲ್ಲಿ ಉಲ್ಲೇಖ: ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದು ಓರೆಕೋರೆ ತಿಳಿಸುವ ಜತೆಗೆ ಇನ್ನಾದರೂ ತಿದ್ದಿಕೊಂಡು ಹೋಗುವಂತೆ ಪರೋಕ್ಷವಾಗಿ ತಿಳಿಹೇಳಿದ್ದಾರೆ.
2019-20ನೇ ಸಾಲಿನಲ್ಲಿ ಒದಗಿಸಿರುವ ಆಯವ್ಯಯಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ವಿಕಲಚೇತನರ ಸಬಲೀಕರಣ ಇಲಾಖೆಯ ವೆಚ್ಚದ ವಿವರ ಪರಿಶೀಲಿಸಲಾಗಿ ನವೆಂಬರ್ ಅಂತ್ಯಕ್ಕೆ ಕಡಿಮೆ ವೆಚ್ಚವಾಗಿರುವುದು ಕಂಡುಬಂದಿದೆ. 2018-19ನೇ ಸಾಲಿನಲ್ಲೂ ವಿವಿಧ ಲೆಕ್ಕ ಶೀರ್ಷಿಕೆಗಳಡಿ ಅನುದಾನ ಪೂರ್ಣವಾಗಿ ಬಳಕೆಯಾಗಿಲ್ಲ. ಇದು ನಿರಂತರವಾಗಿ ನಡೆದಿರುವುದು ಕಂಡುಬಂದಿದೆ’ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
2019-20ನೇ ಸಾಲಿನಲ್ಲಿ ಇಲಾಖೆಗೆ ಒದಗಿಸಿರುವ ಸಂಪೂರ್ಣ ಅನುದಾನವನ್ನು ಪ್ರಸಕ್ತ ಸಾಲಿನ ಅಂತ್ಯದೊಳಗೆ ವೆಚ್ಚ ಮಾಡಬೇಕು ಹಾಗೂ ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡದೆ ಮುಂದಿನ ಸಾಲಿನಲ್ಲಿ ಹೆಚ್ಚುವರಿ ಅನುದಾನಕ್ಕಾಗಿ ಕೋರಿಕೆ ಬಂದಲ್ಲಿ ಪರಿಗಣಿಸುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಸರ್ಕಾರದಿಂದ 2018-19 ಮತ್ತು 2019-20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನಕ್ಕೆ ತಕ್ಕಂತೆ ರಾಜ್ಯ ಸರ್ಕಾರದ ಪಾಲನ್ನು ಸೇರಿಸಿ ಪೂರಕ ಅಂದಾಜಿನಲ್ಲಿ ಅನುದಾನ ಒದಗಿಸಲಾಗಿದೆ. ಈ ಅನುದಾನವನ್ನೂ ಬಳಸಿಕೊಂಡಿಲ್ಲ ಎಂದು ಹೇಳಲಾಗಿದೆ.
ರಾಜ್ಯದ ಅನುದಾನ ಉಳಿಕೆಯಾದರೆ ಅದು ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಕೇಂದ್ರದ ಹಣವನ್ನು ಬಳಸದಿದ್ದಲ್ಲಿ ರಾಜ್ಯಕ್ಕೆ ನಷ್ಟ ಎಂಬುದನ್ನು ಪರೋಕ್ಷವಾಗಿ ಪತ್ರದಲ್ಲಿ ಹೇಳಲಾಗಿದೆ.
ಮುಂದೇನು?: 2019-20ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ಎಂದು ಆ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ತಾಕೀತು ಮಾಡಲಾಗಿದೆ.
ರಾಜ್ಯಸರ್ಕಾರ ಇಲಾಖೆಗೆ 2017-18ರಲ್ಲಿ 4926 ಕೋಟಿ ರೂ., 2018-19ರಲ್ಲಿ 5725 ಕೋಟಿ ರೂ., 2019-20ರಲ್ಲಿ 5251 ಕೋಟಿ ರೂ. ಅನುದಾನ ಕೊಟ್ಟರೂ ಪೂರ್ಣವಾಗಿ ಬಳಕೆಯಾಗಿಲ್ಲ. ಸರ್ಕಾರದಿಂದ ತಮ್ಮ ಕ್ಷೇತ್ರಕ್ಕೆ ಹೆಚ್ಚೆಚ್ಚು ಅನುದಾನ ಪಡೆದುಕೊಳ್ಳಲು ಜನಪ್ರತಿನಿಧಿಗಳು ಪರದಾಡುತ್ತಾರೆ. ಹೆಚ್ಚು ಹಣ ಮಂಜೂರಾಗಿ ತಮ್ಮೂರಿನ ಸೌಲಭ್ಯವೂ ಉತ್ತಮಗೊಳ್ಳಲಿ ಎಂದು ಜನರೂ ಹಾತೊರೆಯುತ್ತಾರೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸರ್ಕಾರ ಆಯವ್ಯಯದಲ್ಲಿ ನಿಗದಿ ಮಾಡಿದ ಹಣವೂ ಖರ್ಚಾಗಿಲ್ಲದಿರುವುದು ವಿಪರ್ಯಾಸ.
ಇದೆಲ್ಲ ಸಾಮಾನ್ಯ ಎನ್ನುತ್ತಾರೆ...
ಯಾವ ಯೋಜನೆಯಲ್ಲಿ ಹಣ ಉಳಿಕೆಯಾಗಿದೆ? ಯಾವ ಉದ್ದೇಶಕ್ಕೆ ಹಿನ್ನೆಡೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದಲ್ಲಿ ಇದೆಲ್ಲ ಸಾಮಾನ್ಯ ಬೆಳವಣಿಗೆ ಎನ್ನುತ್ತಾರೆ. ಒಂದು ಗುರಿ ಇಟ್ಟುಕೊಂಡು ಹಣ ಕೇಳಿರುತ್ತೇವೆ, ವಿವಿಧ ಕಾರಣಕ್ಕೆ ಗುರಿಮುಟ್ಟಲಾಗದೆ ಹಣ ಉಳಿದುಬಿಡುತ್ತದೆ. ಇದನ್ನು ಕರ್ತವ್ಯ ಲೋಪ, ಕಡೆಗಣನೆ ಎಂದು ಭಾವಿಸಬಾರದು. ಆರ್ಥಿಕ ಇಲಾಖೆ ಸೂಚನೆಯಂತೆ ಇನ್ಮುಂದೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಬಹುದು ಎಂದು ವಿವರಿಸುತ್ತಾರೆ.
ಹಣ ಇದ್ದರೂ ಬಳಸಿಲ್ಲ
ಈ ಸಾಲಿನಲ್ಲಿ ಬಿಪಿಎಲ್ ಬಾಣಂತಿಯರಿಗೆ ಎರಡು ಸಾವಿರ ರೂ. ಸಹಾಯಧನ, ಹೊಸ ಅಂಗನವಾಡಿ ಸ್ಥಾಪನೆ, ದುಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಮರು ನಿರ್ವಣ, ಮಹಿಳೆಯರಿಗೆ ಉದ್ಯಮಶೀಲತೆ ತರಬೇತಿ ಹಾಗೂ ವಿವಿಧ ಯೋಜನೆಗೆ ಧಾರಾಳವಾಗಿ ಹಣ ಮೀಡಲಿಸಲಾಗಿತ್ತು. ಅದು ಬಳಕೆಯಾಗಿಲ್ಲ.
ಶ್ರೀಕಾಂತ್ ಶೇಷಾದ್ರಿ