ಆರ್ಥಿಕ ಚೇತರಿಕೆಯತ್ತ ಸಾರಿಗೆ ಇಲಾಖೆ

NRD BUS STORYYYYYYYYYYYY
Published on

ರಾಜು ಹೊಸಮನಿ ನರಗುಂದ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. ಪರಿಣಾಮ ಕೋಟ್ಯಾಂತರ ರೂ. ನಷ್ಟದ ಸುಳಿಗೆ ಸಿಲುಕಿದ್ದ ನರಗುಂದದ ಬಸ್ ಘಟಕ ಆರ್ಥಿಕತೆಯಲ್ಲಿ ಚೇತರಿಸಿಕೊಳ್ಳುವ ಕನಸು ಇಮ್ಮಡಿಗೊಂಡಿದೆ.

1993ರಲ್ಲಿ 2 ಎಕರೆ ವಿಶಾಲವಾದ ಜಮೀನಿನಲ್ಲಿ ನರಗುಂದದ ಸಾರಿಗೆ ಘಟಕವನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಇಂದಿನವರೆಗೆ 61 ಶೆಡ್ಯೂಲ್‌ಗಳಿಗೆ 64 ಬಸ್‌ಗಳನ್ನು ಓಡಿಸಲಾಗುತ್ತಿದೆ. 1 ಬಸ್ ಗುಜರಿಯಾಗಿದೆ.

ನರಗುಂದದಿಂದ ಬೆಂಗಳೂರು, ಮಂಗಳೂರ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬಾಗಲಕೋಟಿ, ವಿಜಯಪುರ ಮುಂತಾದ ನಗರಗಳಿಗೆ ತೆರಳುವ 63 ಬಸ್‌ಗಳು ನಿತ್ಯ 22,536 ಕಿಲೋ ಮೀಟರ್ ಪ್ರಯಾಣ ಮಾಡುತ್ತವೆ. ಪ್ರತಿ ಕಿಲೋ ಮೀಟರ್‌ಗೆ 42 ರೂ. ಖರ್ಚು ಮಾಡಲಾಗುತ್ತಿತ್ತು.

ಆದಾಯ ಮಾತ್ರ ಪ್ರತಿ ಕಿಲೋ ಮೀಟರ್‌ಗೆ 33ರಿಂದ 34 ರೂ. ಗಳಂತೆ ಎಲ್ಲ ಶೆಡ್ಯೂಲ್‌ಗಳಿಂದ 6.50 ಲಕ್ಷ ರೂ. ಸಂಗ್ರಹಗೊಳ್ಳುತ್ತಿತ್ತು. ಇದರಿಂದ ನರಗುಂದ ಸಾರಿಗೆ ಘಟಕಕ್ಕೆ ನಿತ್ಯ 3ಲಕ್ಷ ರೂ. ನಷ್ಟವಾಗುತ್ತಿತ್ತು. ಆದರೀಗ ಸರ್ಕಾರ ಜೂ. 11 ರಿಂದ ಶಕ್ತಿ ಯೋಜನೆ ಜಾರಿಗೊಳಿಸಿದ್ದರಿಂದ 6.50 ಲಕ್ಷವಿದ್ದ ಆದಾಯ ಈಗ 9 ಲಕ್ಷಕ್ಕೆ ಏರಿಕೆ ಕಂಡಿದೆ.

ವಾಸ್ತವಿಕವಾಗಿ ಪುರುಷರ ಪ್ರಯಾಣದಿಂದ ಈಗಾಗಲೇ 4 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಇನ್ನೂಳಿದ 5 ಲಕ್ಷ ರೂಪಾಯಿ ಬಾಕಿ ಆದಾಯ ರಾಜ್ಯ ಸರ್ಕಾರದಿಂದ ಉಚಿತ ಶಕ್ತಿ ಯೋಜನೆಯಡಿ ಎಲ್ಲ ಕೆಎಸ್‌ಆರ್‌ಟಿಸಿಗೆ ಭರಿಸಬೇಕಿರುವುದರಿಂದ ನಷ್ಟದ ಸುಳಿಗೆ ಸಿಲುಕಿದ್ದ ಸಾರಿಗೆ ಘಟಕಗಳು ಆರ್ಥಿಕ ಚೇತರಿಕೆಯ ಕನಸು ಕಾಣುವಂತಾಗಿದೆ.

ಶಕ್ತಿ ಯೋಜನೆಯಿಂದ ವಂಚಿತಗೊಂಡಿರುವ ಮಹಿಳೆಯರು!

ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಆದರೆ, ತಾಲೂಕಿನ ಗಡಿಗ್ರಾಮ ಲಖಮಾಪೂರ, ವಾಸನ, ಹಳೇ ಬೂದಿಹಾಳ ಗ್ರಾಮಗಳಿಗೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳಾದರೂ ಇನ್ನೂ ಬಸ್‌ಗಳೇ ತೆರಳುತ್ತಿಲ್ಲ. ಈ ಮೂರು ಗ್ರಾಮಗಳ ಮಹಿಳೆಯರು, ವಿವಿಧ ಶಾಲಾ, ಕಾಲೇಜ್‌ಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಎರಡ್ಮೂರು ಕಿಲೋ ಮೀಟರ್ ನಡೆದುಕೊಂಡು ಕೊಣ್ಣೂರ- ರಾಮದುರ್ಗ ರಸ್ತೆಗೆ ಬಂದು ಬಸ್ ಏರುವ ಸಂದರ್ಭ ಇಲ್ಲಿದೆ.

ಪ್ರವಾಹಪೀಡಿತ ಗಡಿ ಗ್ರಾಮ ಲಖಮಾಪೂರ ಹಾಗೂ ವಾಸನಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ, ಯಾರೊಬ್ಬರೂ ಇದುವರೆಗೆ ಸೂಕ್ತ ಸ್ಪಂದನೆ ನೀಡಿಲ್ಲ. ನರಗುಂದದಿಂದ- ಗದಗಿಗೆ ಪ್ರತಿದಿನ ರಾತ್ರಿ 8.45ಕ್ಕೆ ತೆರಳುತ್ತಿದ್ದ ಕೊನೆಯ ಬಸ್ ಬಂದ್ ಮಾಡಿದ್ದರಿಂದ ಈ ಮಾರ್ಗವಾಗಿ ವಿವಿಧ ಗ್ರಾಮಗಳಿಗೆ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ಸಂಜೆ 6 ಗಂಟೆಯೊಳಗಾಗಿ ಮನೆಗೆ ತೆರಳುವ ಸ್ಥಿತಿ ನಿರ್ಮಾಣಗೊಂಡಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳು ತಕ್ಷಣವೇ ಎಲ್ಲ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು. - ಶರಣು ಕರಬಸಣ್ಣವರ. ವಾಸನ ಗ್ರಾಮದ ನಿವಾಸಿ

ನರಗುಂದ ತಾಲೂಕಿನ ಲಖಮಾಪೂರ, ವಾಸನ ಗ್ರಾಮಗಳಿಗೆ ಬಸ್ ಸಂಚಾರ ಮರು ಆರಂಭಿಸುವಂತೆ ಸಚಿವ ಎಚ್.ಕೆ. ಪಾಟೀಲ ಹಾಗೂ ಗದಗ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ (ಡಿಸಿ) ಜಿ. ಸೀನಯ್ಯ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಸಮರ್ಪಕ ರಸ್ತೆ, ಸೇತುವೆ ಪರಿಶೀಲಿಸಿ ಬಸ್ ಸಂಚಾರ ಪ್ರಾರಂಭಿಸಲಾಗುತ್ತದೆ. ನರಗುಂದ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಹಳೆಯ ಸಿಸಿ ಕ್ಯಾಮರಾ ತೆಗೆದು ಹೊಸ ಸಿಸಿ ಕ್ಯಾಮರಾ ಅಳವಡಿಸುವ ತೀರ್ಮಾನ ಕೈಗೊಂಡಿದ್ದೇವೆ. -ಪ್ರಶಾಂತ ಪಾನಬುಡೆ. ನರಗುಂದ ಘಟಕ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net