

ಬೀರೂರು: ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಪುರಸಭೆ ವಿವಾದಕ್ಕೀಡಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕೃಷಿ ಜಮೀನನ್ನು ತ್ಯಾಜ್ಯ ವಿಲೇಗೆ ಗುರುತಿಸಿ ಪುರಸಭೆಗೆ ನೀಡಿದ್ದು, ಇದಕ್ಕೆ ಕೃಷಿಕ ಕುಟುಂಬಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಪುರಸಭೆಗೆ ಕಡೂರು ತಹಸೀಲ್ದಾರ್, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ವರದಿ ತಯಾರಿಸಿ ಹಿರಿಯಂಗಳ ಗ್ರಾಮದ ಸರ್ವೆ ನಂ 434 ಮತ್ತು 435 ರಲ್ಲಿ ಜಾಗ ಗುರುತಿಸಿದ್ದಾರೆ. ಗುರುತಿಸಿರುವ ಜಾಗ ಯಾವುದೇ ರೈತರು ಉಳುಮೆ ಮಾಡುತ್ತಿಲ್ಲ. ಅದು ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಎಂದು ವರದಿ ಸೃಷ್ಟಿಸಿದ್ದಾರೆ. ಆದರೆ ಇದೇ ಜಾಗದಲ್ಲಿ 30 ವರ್ಷಗಳಿಂದ ಉಳುಮೆ ಮಾಡುತ್ತಿರುವುದರಿಂದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತ ಶಿವಣ್ಣ ಮತ್ತು ರಾಜಪ್ಪ ಪಟ್ಟುಹಿಡಿದಿದ್ದಾರೆ.
ಪುರಸಭೆ ಗುರುತಿಸಿರುವ ಸರ್ವೆ ನಂ 434 ಮತ್ತು 435ರ ಪ್ರದೇಶಕ್ಕೆ 1999ರಲ್ಲಿ ಬಗರ್ ಹುಕುಂನ 50 ಮತ್ತು 53ನೇ ನಮೂನೆಯಲ್ಲಿ ಅರ್ಜಿ ಕೂಡ ಸಲ್ಲಿಸಿರುವ ದಾಖಲಾತಿಯನ್ನು ಇಬ್ಬರೂ ರೈತರು ಹೊಂದಿದ್ದಾರೆ. ಆದರೆ ಕಂದಾಯ ಇಲಾಖೆ, ತಾಲೂಕು ಆಡಳಿತ ಜಮೀನನ್ನು ಪುರಸಭೆಗೆ ಮಂಜೂರು ಮಾಡಿದೆ. ಜಮೀನಿನಲ್ಲಿ ಉಳುಮೆ ಮಾಡಿದ್ದು, ನೀರಿಗಾಗಿ ಕೃಷಿಹೊಂಡವನ್ನೂ ನಿರ್ವಿುಸಿದ್ದಾರೆ.
1999ರಲ್ಲಿ ಸಾಗುವಳಿ ಚೀಟಿ ನೀಡುವಂತೆ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದೆವು. ಸರ್ವೆ ಸ್ಕೆಚ್ ಆದ ಬಳಿಕ ಮತ್ತೆ ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಿದ್ದೆವು. ಇನ್ನೂ ಅರ್ಜಿ ಮಾನ್ಯ ಮಾಡಿಲ್ಲ. 2016ರಲ್ಲಿ ಸರ್ವೆಯರ್ ಜಮೀನು ಪರಿಶೀಲನೆ ನಡೆಸಿ ಸ್ಕೆಚ್ ತಯಾರಿಸಿ ಜಿಪಿಎಸ್ ಮಾಡಿ ವರದಿ ನೀಡಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ಅವರಲ್ಲಿ ದಾಖಲಾತಿಯೂ ಇದೆ. ಕೃಷಿ ಮಾಡಿ ಜೀವನ ನಡೆಸುತ್ತಿದ್ದೇವೆ. ನಮಗೆ ಗೊತ್ತಿಲ್ಲದಂತೆ ಅಧಿಕಾರಿಗಳು ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಇಬ್ಬರೂ ರೈತರು ಆರೋಪಿಸಿದ್ದಾರೆ. ಕೃಷಿ ಜಮೀನನ್ನು ಕಂದಾಯ ಇಲಾಖೆ ಮಂಜೂರು ಮಾಡಿ ನೀಡಿದೆ. ಈಗ ಪುರಸಭೆಯೇ ಈ ಸಮಸ್ಯೆ ಬಗೆಹರಿಸಬೇಕು.
ಎರಡು ಸರ್ವೆ ನಂಬರ್ನಲ್ಲಿ ಗುರುತು: ಕಂದಾಯ ಇಲಾಖೆ ಸರ್ವೆ ನಂ 434 ರಲ್ಲಿ 9.16 ಎಕರೆ ಜಮೀನು ಮತ್ತು ಸರ್ವೆ ನಂ 435ರಲ್ಲಿ 51 ಎಕರೆ ಜಮೀನು ಇಲಾಖೆಗೆ ಸೇರಿದ್ದು. ಇಲ್ಲಿ ಯಾರೂ ಸಾಗುವಳಿ ಚೀಟಿ ಕೋರಿ ಅರ್ಜಿ ಸಲ್ಲಿಸಿಲ್ಲ ಎನ್ನುವ ವರದಿ ನೀಡಿದೆ. ಆದರೆ ಒಂದೇ ಸರ್ವೆ ನಂಬರಿನಲ್ಲಿ ಪುರಸಭೆಗೆ 8.20 ಎಕರೆ ಜಮೀನನ್ನು ಮಂಜೂರು ಮಾಡಬಹುದಿತ್ತು. ಬದಲಾಗಿ ಎರಡು ಸರ್ವೆ ನಂಬರಿನಲ್ಲಿ ಜಾಗ ಮಂಜೂರು ಮಾಡಿರುವುದು ಅನುಮಾನ ಹುಟ್ಟುಹಾಕಿದೆ.
ಎಲ್ಲೆಡೆ ವಿರೋಧ: ಪುರಸಭೆ ಕಸ ವಿಲೇಗೆ ಈ ಹಿಂದೆ ಎರಡು ಕಡೆ ಜಾಗ ಗುರುತಿಸಿ ಜನರ ವಿರೋಧದಿಂದ ನಿರ್ಧಾರ ಬದಲಿಸಿತು. ಬೀರೂರು ಕಾವಲ್ ಸರ್ವೆ ನಂಬರ್ 4ರಲ್ಲಿ 8 ಎಕರೆ ಜಾಗ ಮಂಜೂರಾಗಿತ್ತು. ಆದರೆ ಅಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಕಸ ವಿಲೇಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಕಸ ವಿಲೇಗೆ ಬೇರೆಡೆ ಜಾಗ ಹುಡುಕಲು ಹೊರಟಿತು. ನಂತರ ಎಲೆದೊಡ್ಡಿ ಗ್ರಾಮದ ಸರ್ವೆ ನಂ 71ರಲ್ಲಿ 10 ಎಕರೆ ಜಾಗ ಗುರುತಿಸಲಾಯಿತು. ಇದರ ಜತೆಗೆ ಹಿರಿಯಂಗಳ ಗ್ರಾಮದಲ್ಲೂ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಂಡಿದೆ.
30 ವರ್ಷಗಳಿಂದ ಸಾಗುವಳಿ ಮಾಡಿ ಜೀವನ ಕಟ್ಟಿಕೊಂಡಿದ್ದೆವು. ನನ್ನ ಕಾಲು ಊನವಾಗಿದ್ದರಿಂದ ಬೇರೆಡೆ ಕೆಲಸ ಮಾಡಲು ಸಾಧ್ಯವಿಲ್ಲ. ಈ ಜಮೀನು ಬಿಟ್ಟರೆ ಜೀವನಕ್ಕೆ ಬೇರೆ ಆಧಾರವೇ ಇಲ್ಲ. ಮಾನವೀಯ ದೃಷ್ಟಿಯಿಂದಲಾದರೂ ಜಿಲ್ಲಾಡಳಿತ ಕೃಷಿ ಭೂಮಿಯನ್ನು ಬಿಟ್ಟುಕೊಡಲಿ. ಈ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ಮಾನ್ಯ ಮಾಡಿ ಸಾಗುವಳಿ ಚೀಟಿ ಕೊಡಿಸಲಿ ಎಂಬುದು ಹಿರಿಯಂಗಳ ಗ್ರಾಮದ ಕೃಷಿಕ ರಾಜು ಅವರ ಒತ್ತಾಯ.
ಜಾಗ ಪರಿಶೀಲನೆ ನಡೆಸಿಯೇ ಎಂಟು ತಿಂಗಳ ಹಿಂದೆ ಪುರಸಭೆಗೆ ಮಂಜೂರು ಮಾಡಿಕೊಡಲಾಗಿತ್ತು. ಜಾಗ ಕಂದಾಯ ಇಲಾಖೆಗೆ ಸೇರಿದೆ. ಆಕ್ಷೇಪ ವ್ಯಕ್ತಪಡಿಸುವವರು ಉಳುಮೆ ಮಾಡಿರುವ ಜಾಗ ತೋರಿಸಿದರೆ ಮಂಜೂರು ಮಾಡಿಕೊಡಲಾಗುವುದು ಎನ್ನುತ್ತಾರೆ ಕಡೂರು ತಹಸೀಲ್ದಾರ್ ಉಮೇಶ್.