ಸಮಾನ ಕೆಲಸಕ್ಕೆ ಬೇಕು ಸಮಾನ ವೇತನ

web 3
Published on

ಚಿಕ್ಕಮಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸತತ ಮೂರನೇ ದಿನ ಕೆಲಸ ಬಹಿಷ್ಕರಿಸಿ ಪ್ರತಿಭಟನೆ ಮುಂದುವರಿಸಿರುವ ನೌಕರರು, ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ನೌಕರರನ್ನು ಒಡೆದು ಆಳುವ ನೀತಿ ಮುಂದುವರಿಸಿದೆ. ಕರೊನಾ ಹಾವಳಿ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದರೂ ನೌಕರರ ಬೇಡಿಕೆಗೆ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಬೇಕಾಗಿದೆ ಎಂದು ಮನವಿಯಲ್ಲಿ ಗಮನ ಸೆಳೆದಿದ್ದಾರೆ.

ಅಧಿಕಾರಿಗಳ ಮೂಲಕ ಮುಷ್ಕರ ನಿರತ ನೌಕರರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರ ನಿರ್ದೇಶನ ನೀಡಿರುವುದು ವಿಷಾದನೀಯ. ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಮೌನ ವಹಿಸಿದೆ. ನೋಟಿಸ್ ಜಾರಿಗೊಳಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ.

ಗುತ್ತಿಗೆ ನೌಕರರೆಂದರೆ ಸರ್ಕಾರ ತಾತ್ಸಾರ ತೋರುತ್ತಿರುವುದೇಕೆ? ಕರೊನಾ ಲಾಕ್​ಡೌನ್​ನಿಂದ ಅಲ್ಪ ವೇತನ, ಜತೆಗೆ ಸರ್ಕಾರ ಈಗ ನೀಡುತ್ತಿರುವ ಸಂಬಳವೂ ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪದೋನ್ನತಿ ನೀಡಿಲ್ಲ. ವಿಮೆ ಸೌಲಭ್ಯಗಳಿಲ್ಲ. ವರ್ಷಕ್ಕೆ 10 ದಿನ ಮಾತ್ರ ರಜೆ ಸೌಲಭ್ಯ ನೀಡಲಾಗಿದೆ. ಮಹಿಳಾ ಸಿಬ್ಬಂದಿಗೆ ಕುಟುಂಬ ಶಸ್ತ್ರಚಿಕಿತ್ಸೆ ರಜೆ ಇರುವುದಿಲ್ಲ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ವೇತನ ಕಡಿಮೆ ಇದ್ದರೂ ಸರ್ಕಾರಿ ಕೆಲಸ ಎಂದು ಬಿಪಿಎಲ್ ಕಾರ್ಡ್ ನೀಡಲು ನಿರಾಕರಿಸಲಾಗುತ್ತಿದೆ. ವೈದ್ಯಕೀಯ ಸೌಲಭ್ಯ, ಸೇವಾ ಭದ್ರತೆಗಳಿಲ್ಲದೆ ಕೆಲಸ ಮಾಡಬೇಕಾಗಿದೆ. ಹೊರಗುತ್ತಿಗೆ ನೌಕರರೆಂದರೆ ಬ್ಯಾಂಕ್​ಗಳಲ್ಲೂ ಸಾಲ ನೀಡುತ್ತಿಲ್ಲ. ಎಚ್​ಆರ್ ಪಾಲಿಸಿಗಳಿಲ್ಲ. ಡೆತ್ ಬೆನಿಫಿಟ್​ಗಳಿಲ್ಲದೆ ಕೆಲಸ ಮಾಡಬೇಕಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net