

ಮದ್ದೂರು: ಟೆಂಡರ್ ಅವಧಿ ಮುಗಿದಿದ್ದರೂ ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ಅಧಿಕಾರಿಗಳು ಕಾನೂನು ಬಾಹಿರವಾಗಿ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪಟ್ಟಣದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು, ಹಣದ ಆಮಿಷಕ್ಕೆ ಅಧಿಕಾರಿಗಳು ಒಳಗಾಗಿ ಅಕ್ರಮವಾಗಿ ಗುತ್ತಿಗೆ ವಿಸ್ತರಣೆ ಮಾಡಲಾಗಿದೆ ಎಂದು ಆರೋಪಿಸಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡ ಶಿವಲಿಂಗಯ್ಯ ಮಾತನಾಡಿ, ಗ್ರಾಮದ ದೊಡ್ಡ ಕೆರೆಯಲ್ಲಿ ಮೀನು ಹಿಡಿಯಲು ರವಿಕುಮಾರ್ ಎಂಬುವರಿಗೆ ಇಲಾಖೆ ವತಿಯಿಂದ ಗುತ್ತಿಗೆ ನೀಡಿದ್ದು, ಅವಧಿ ಮುಗಿದಿದ್ದರೂ ಅಧಿಕಾರಿಗಳು ಕಾನೂನು ಪ್ರಕಾರ ಅಥವಾ ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಹಣದ ಆಮಿಷಕ್ಕೆ ಒಳಗಾಗಿ ಗುತ್ತಿಗೆ ಮುಂದುವರಿಸಿರುವ ಕ್ರಮ ಖಂಡನಾರ್ಹ. ಇದರಲ್ಲಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಗುತ್ತಿಗೆಯನ್ನು ರದ್ದು ಪಡಿಸಿ, ಪಾರದರ್ಶಕವಾಗಿ ಟೆಂಡರ್ ನೀಡದಿದ್ದರೆ ದೊಡ್ಡ ಕೆರೆಯ ಅಂಗಳದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಮಾಡುತ್ತಿದ್ದರೂ ಸ್ಥಳಕ್ಕೆ ಆಗಮಿಸದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಭಾನು ಅವರ ಕ್ರಮವನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿ ಪ್ರತಿಭಟನೆ ಹಿಂಪಡೆದರು.