ಆಮೆಗತಿ ಪಡೆದ ಶಿಕ್ಷಣ ಇಲಾಖೆ ಚಟುವಟಿಕೆ?

mulabagilu
Published on

ಎ.ಅಪ್ಪಾಜಿಗೌಡ ಮುಳಬಾಗಿಲು: ಬೇಸಿಗೆ ರಜೆ ಮುಗಿಸಿ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭಕ್ಕೆ ಮೊದಲು ಗುರುವಾರ ಶಾಲೆ ಪ್ರಾರಂಭೋತ್ಸವವಾಗಿದ್ದು, ದಾಖಲಾತಿ ಮತ್ತಿತರ ಚಟುವಟಿಕೆಗಳು ಬಿರುಸುಗೊಳ್ಳುವ ಹೊತ್ತಲ್ಲಿ ಹಲವು ತಿಂಗಳ ಹಿಂದೆ ಕಚೇರಿಗಳ ಮುಂದೆ ಹಾಕಿರುವ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯುಳ್ಳ ಫ್ಲೆಕ್ಸ್  ಬೋರ್ಡ್​ಗಳು ಕಳಾಹೀನವಾಗಿವೆ.

ವಿಶೇಷ ದಾಖಲಾತಿ ಆಂದೋಲನಕ್ಕೆ ಸೂಚನೆ ನೀಡಿರುವ ಶಿಕ್ಷಣ ಇಲಾಖೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿರುವ ಶಿಕ್ಷಣ ಇಲಾಖೆಗಳ ಮುಂಭಾಗ ಅಳವಡಿಸಿರುವ ಫಲಕಗಳಲ್ಲಿ ಹಲವು ತಿಂಗಳ ಹಿಂದೆ ಹಾಕಿರುವ ತಿಂಗಳ ತಿರುಳು ಫ್ಲೆಕ್ಸ್​ ಬೋರ್ಡ್​ಗಳು ಹಾಗೇ ಇವೆ. ಈ ನಡುವೆ ಮಾರ್ಗದರ್ಶಿಯಾಗಬೇಕಾದ ಶಿಕ್ಷಣ ಇಲಾಖೆ ಕಚೇರಿಗಳೇ ಕಳಹೀನವಾಗಿ ಕಂಡು ಬರುತ್ತಿರುವುದು ಸರ್ಕಾರ ಮತ್ತು ಇಲಾಖೆಯಲ್ಲಿ ಅನುದಾನ ಕೊರತೆಯ ಸಂಶಯ ಕಾಡುತ್ತಿದೆ.

ಪ್ರತಿ ತಿಂಗಳು ಶಿಕ್ಷಣ ಇಲಾಖೆ ತಿಂಗಳ ತಿರುಳು ಮೂಲಕ ಶಿಕ್ಷಕರಿಗೆ ಆಯಾ ತಿಂಗಳು ಏನೇನು ಚಟುವಟಿಕೆ ಹಮ್ಮಿಕೊಳ್ಳಬೇಕು ಎಂಬ ಸ್ಪಷ್ಟ ಮಾಹಿತಿಯನ್ನು ಫಲಕಗಳ ಮೇಲೆ ಅಂಟಿಸಲಾಗುತ್ತದೆ.

"ಎರಡು ವರ್ಷ ಶಿಕ್ಷಣದಲ್ಲಿ ಹರ್ಷ' ಎಂಬ ಶೀರ್ಷಿಕೆಯಡಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಮಾಡುತ್ತಿದ್ದರೂ ಇಲಾಖೆಗಳ ಕಚೇರಿ ಮುಂಭಾಗದ ಪ್ರಚಾರ ಫಲಕಗಳು ತುಕ್ಕು ಹಿಡಿದಿವೆ

ಅಧಿಕಾರಿಗಳ ಪ್ರಕಾರ ಬಂದಿರುವ ಪಠ್ಯಪುಸ್ತಕಗಳಲ್ಲಿ ಶೇ.75 ವಿತರಣೆ ಮಾಡಲಾಗಿದೆ ಎನ್ನುತ್ತಾರಾದರೂ ನಿಖರ ಮಾಹಿತಿ ನೀಡುವಲ್ಲಿ ಹಿಂಜರಿಯುತ್ತಾರೆ. ಪಠ್ಯಪುಸ್ತಕಗಳ ಭಾವಚಿತ್ರ ತೆಗೆಯಲು ಬಿಇಒ ಅನುಮತಿ ಬೇಕು ಎಂದು ಇಸಿಒ ಮಮತಾ ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಪಠ್ಯಪುಸ್ತಕ ವಿತರಣೆ ಕಾರ್ಯ ಸುಗಮವಾಗಿಲ್ಲ ಎಂಬುದು ಕೈಗನ್ನಡಿಯಾಗಿದೆ. ಶೇ.25 ಪಠ್ಯ ಪುಸ್ತಕಗಳು ಇನ್ನೂ ಬರಬೇಕಿದ್ದು, ಉಳಿದವೆಲ್ಲವೂ ಎರಡು ದಿನದಲ್ಲಿ ವಿತರಣೆ ಪೂರ್ಣಗೊಳ್ಳಲಿದೆ ಎಂಬ ಹಾರಿಕೆ ಉತ್ತರ ಮಾತ್ರ ಸಿದ್ಧ ಸೂತ್ರ.

ನೇಮಕವಾಗದ ಶಿಕ್ಷಕರು

ಖಾಲಿ ಉಳಿದಿರುವ ಶಿಕ್ಷಕರ ಸ್ಥಾನಕ್ಕೆ ಅತಿಥಿ ಶಿಕ್ಷಕರ ನೇಮಕವೂ ನಡೆದಿಲ್ಲ. ಶಾಲೆಗಳ ದುರಸ್ತಿ ಆಗಿಲ್ಲ. ಮುಳಬಾಗಿಲು ತಾಲೂಕಿನಲ್ಲಿ ಮುಚ್ಚಿರುವ 11 ಸರ್ಕಾರಿ ಶಾಲೆಗಳು, 4 ಖಾಸಗಿ ಶಾಲೆಗಳು ತೆರೆಯುವ ಮುನ್ಸೂಚನೆ ಕಾಣುತ್ತಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಇಲಾಖೆ ಪ್ರಯತ್ನ ಕಾಗದದಲ್ಲೇ ಉಳಿಯುತ್ತದೆಯೋ ಅಥವಾ ಕಾರ್ಯರೂಪಕ್ಕೆ ಬರುತ್ತದೆಯೋ ಎಂಬುದು ಪಾಲಕರ ಚಿಂತೆಯಾಗಿದೆ.

21 ಶಾಲೆಗಳಿಗೆ ಬೀಗ! ತಾಲೂಕಿನಲ್ಲಿ ಈ ಬಾರಿ 6,116 ವಿದ್ಯಾರ್ಥಿಗಳು ದಾಖಲಾಗುವ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ತಾಲೂಕಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ 274, ಹಿರಿಯ ಪ್ರಾಥಮಿಕ 148, ಒಟ್ಟು 422 ಶಾಲೆಗಳ ಪೈಕಿ 10 ಶಾಲೆಗಳನ್ನು ಮುಚ್ಚಲಾಗಿದೆ. ಕಳೆದ ವರ್ಷ 412 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವುದು 401 ಶಾಲೆಗಳು ಮಾತ್ರ. ಒಟ್ಟು 21 ಶಾಲೆಗಳ ಬಾಗಿಲು ಬಂದ್​ ಆಗಿದೆ. 66 ಪ್ರೌಢಶಾಲೆಗಳಲ್ಲಿ ಈ ಬಾರಿ ಒಂದು ಶಾಲೆ ಹೆಚ್ಚಾಗುವ ಸಾಧ್ಯತೆ ಇದೆ. 20 ಪಿಯು ಕಾಲೇಜುಗಳಿದ್ದು ಇಲ್ಲಿಯೂ ಒಂದು ಕಾಲೇಜು ಹೆಚ್ಚು ಮಾಡುವ ಗುರಿ ಹೊಂದಿದೆ. ಒಟ್ಟಾರೆ 508 ಶಾಲೆಗಳ ಪೈಕಿ 494 ಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಸರ್ಕಾರಿ ಅನುದಾನಿತ 27 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅನುದಾನ ರಹಿತ 69 ರಲ್ಲಿ 66 ಶಾಲೆಗಳು ಕಾರ್ಯಾರಂಭ ಮಾಡಿವೆ. ಖಾಸಗಿ ಶಾಲೆಗಳಿಗೆ ಇಲಾಖೆ ನಿಗದಿಪಡಿಸಿದ ದರದಂತೆ ಚಲನ್​ ಕಟ್ಟಿರುವ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪ್ರತ್ಯೇಕ ಕೌಂಟರ್​ನಲ್ಲಿ ವಿತರಣೆ ಮಾಡಲಾಗುತ್ತದೆ.

ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗೆ ಈಗಾಗಲೇ ಶಿಕ್ಷಣ ಇಲಾಖೆ ಸೂಚನೆಯಂತೆ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಎಲ್ಲ ಬಿಇಒಗಳಿಗೆ ಸೂಚನೆ ನೀಡಿದ್ದು ಜೂ.1ರೊಳಗೆ ಶಾಲೆಗಳಿಗೆ ಕಳಿಸಿಕೊಡಲು ಸೂಚನೆ ನೀಡಲಾಗಿದೆ. ಇಲಾಖೆ ಮುಂಭಾಗ ಫಲಕಗಳ ಮೇಲೆ ತಿಂಗಳ ತಿರುಳು ಅಳವಡಿಸುವುದು ಇಲಾಖೆಗೆ ಸಂಬಂಧಿಸಿದಾಗಿದೆ. > ಕೃಷ್ಣಮೂರ್ತಿ ಉಪ ನಿರ್ದೇಶಕ, ಶಿಕ್ಷಣ ಇಲಾಖೆ ಕೋಲಾರ ತಾಲೂಕಿನಲ್ಲಿ ಮುಚ್ಚಿರುವ ಶಾಲೆಗಳನ್ನು ಪುನಃ ತೆರೆಯಲು ಶಿಕ್ಷಣ ಸಂಯೋಜಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ದಾಖಲಾದರೆ ಶಾಲೆ ಆರಂಭಿಸಲಾಗುವುದು. ಬಂದಿರುವ ಪಠ್ಯಪುಸ್ತಕಗಳಲ್ಲಿ ಶೇ.75 ವಿತರಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಉಳಿದಿರುವ ಶೇ. 25 ಪಠ್ಯಪುಸ್ತಕಗಳನ್ನು ಬಂದ ನಂತರ ವಿತರಣೆ ಮಾಡಲಾಗುವುದು. > ಕೆ. ಎನ್​. ರಾಮಚಂದ್ರಪ್ಪ ಬಿಇಒ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net