

ಅಳವಂಡಿ: ಪ್ರಸಕ್ತ ವರ್ಷದಿಂದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗವನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಹನುಮಂತಪ್ಪ ಅಂಡಗಿ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದಲ್ಲಿ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯ ಹಾಗೂ ಉಪನ್ಯಾಸಕರ ತಂಡ ಅಳವಂಡಿ ವಲಯದ ಗ್ರಾಮಗಳಲ್ಲಿ ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ದಾಖಲಿಸುವಂತೆ ಗ್ರಾಮಸ್ಥರಲ್ಲಿ ಶನಿವಾರ ಜಾಗೃತಿ ಮೂಡಿಸಿದರು.
ಅಳವಂಡಿ ಗ್ರಾಮದಲ್ಲಿ ಪಿಯುಸಿ ವಾಣಿಜ್ಯ ವಿಭಾಗ ಇಲ್ಲ. ಆದರೆ, ಹಿರೇಸಿಂದೋಗಿಯಲ್ಲಿ ಪ್ರಸಕ್ತ ವರ್ಷ ಆರಂಭಿಸಲಾಗಿದೆ. ಇಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲದೆ ಉಚಿತವಾಗಿ ದಾಖಲಾತಿ ನೀಡಲಾಗುವುದು. ದಾಖಲಾಗುವ ಎಲ್ಲ ಮಕ್ಕಳ ಶುಲ್ಕವನ್ನು ಹಿರೇಸಿಂದೋಗಿ ಗ್ರಾಮದ ದಾನಿ ಸದಾಶಿವರಡ್ಡಿ ಮಾದಿನೂರ ನೀಡಲಿದ್ದಾರೆ ಎಂದರು.
ಬೂದಿಹಾಳ, ಡಂಬ್ರಳ್ಳಿ, ಬೇಳೂರ, ಕಾತರಕಿ, ನೀರಲಗಿ, ಹನಕುಂಟಿ, ಬಿಸರಹಳಿ, ಮೈನಹಳ್ಳಿ ಕೋಳೂರ, ಕಾಟ್ರಳ್ಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳನ್ನು ದಾಖಲಿಸುವಂತೆ ಮನವಿ ಮಾಡಿದರು.
ಉಪನ್ಯಾಸಕ ವೀರಣ್ಣ ಜೋಗಿನ, ಗ್ರಾಮಸ್ಥರಾದ ಏಳುಕೋಟೇಶ ಕೋಮಲಾಪುರ, ಬಸವರಾಜ ಬಾರಕೇರ, ಮಲ್ಲಪ್ಪ ಗುದ್ದಣಿ, ಇಮಾಮ್‌ಸಾಬ್ ಭಾವಿ, ಮಲ್ಲಪ್ಪ ಶಿವಶಿಂಪಿ, ಸೋಮಪ್ಪ ಮತ್ತೂರು ಇತರರು ಇದ್ದರು.
ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರೇ ಆಗಿರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಅನೂಕೂಲ ಆಗಲೆಂದು ದಾನಿಗಳಿಂದ ಹಣ ಪಡೆದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.| ಹನುಮಂತಪ್ಪ ಅಂಡಗಿ, ಪ್ರಾಚಾರ್ಯ, ಹಿರೇಸಿಂದೋಗಿ