ಬಾಡಿಗೆ ನೀಡಿಲ್ಲವೆಂದು ಅಂಗನವಾಡಿಗೆ ಬೀಗ

dj hsd anganavadi
Published on

ಹೊಸದುರ್ಗ: ಪಟ್ಟಣದ ಕಲ್ಲೇಶ್ವರ ಬಡಾವಣೆಯ ಅಂಗನಾವಾಡಿ ಕೇಂದ್ರ ಕಟ್ಟಡದ 10 ತಿಂಗಳ ಬಾಡಿಗೆ ಪಾವತಿಯಾಗದ ಹಿನ್ನಲೆಯಲ್ಲಿ ಮಾಲೀಕರು ಗುರುವಾರ ಬೀಗ ಹಾಕಿದ ಪರಿಣಾಮ ಮಕ್ಕಳು ರಸ್ತೆಯಲ್ಲಿಯೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳ ಅಭಿವೃದ್ಧಿಯ ಹೊಣೆಗಾರಿಕೆ ಹೊತ್ತ ಮಕ್ಕಳ ಕಲ್ಯಾಣ ಮತ್ತು ಮಹಿಳಾಭಿವೃದ್ಧಿ ಇಲಾಖೆಯ ನಿರ್ಲಕ್ಷೃದಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ.

ಪಟ್ಟಣದಲ್ಲಿರುವ 25 ಕೇಂದ್ರಗಳ ಪೈಕಿ 23 ಅಂಗನವಾಡಿಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ಸರ್ಕಾರ ನಿಗದಿತ ಅವಧಿಯಲ್ಲಿ ಕಟ್ಟಡಗಳ ಬಾಡಿಗೆಯನ್ನು ನೀಡದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.

ಕಟ್ಟಡದ ಮಾಲೀಕರು ಕಳೆದ ನಾಲ್ಕು ತಿಂಗಳಿಂದಲೂ ಬಾಡಿಗೆ ಹಣವನ್ನು ಕೇಳಿದ್ದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ.

ಎರಡು ತಿಂಗಳ ಹಿಂದೆ ಇಲಾಖೆ ಸಿಬ್ಬಂದಿ ವಾರದೊಳಗೆ ಹಣ ಪಾವತಿಸುವ ಭರವಸೆ ನೀಡಿದ್ದರು. ಇಲ್ಲಿಯವರೆಗೂ ಯಾವುದೇ ಹಣ ನೀಡಿಲ್ಲ. ಹೀಗಾಗಿ ಬೀಗ ಹಾಕಲಾಗಿದೆ ಎಂದು ಮಾಲೀಕರು ಹೇಳುತ್ತಾರೆ.

ಗುರುವಾರ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಬಂದ ಪಾಲಕರು ಬೀಗ ಹಾಕಿರುವುದನ್ನು ಗಮನಿಸಿ, ಸೂಪರ್‌ವೈಸರ್‌ಗೆ ತಿಳಿಸಿದ್ದಾರೆ.

ಒಂದೂವರೆ ಕಿ.ಮೀ ದೂರದ ಪೋಲಿಸ್ ಕ್ವಾಟ್ರಸ್ ಬಳಿಯ ಅಂಗನವಾಡಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ನಾನು ಮಿಟಿಂಗ್‌ನಲ್ಲಿದ್ದೇನೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಥಳದಲ್ಲಿದ್ದ ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ, ಕಳೆದ 10 ತಿಂಗಳಿಂದ ಬಾಡಿಗೆ ಹಣ ನೀಡಲು ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಿದ್ದರಿಂದ ಬೇಸರಗೊಂಡ ಮಾಲೀಕರು ಕೇಂದ್ರಕ್ಕೆ ಬೀಗ ಹಾಕಿದ್ದಾರೆ.

ಇಲಾಖೆ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ಸೌಜನ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಬುಧವಾರ ರಾತ್ರಿ 7 ಗಂಟೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಬಾಡಿಗೆ ಬಿಲ್ಲನ್ನು ಖಜಾನೆಗೆ ಸಲ್ಲಿಸಲಾಗಿದೆ. ಮಾಲೀಕರ ಖಾತೆಗೆ ಶೀಘ್ರ ಬಾಡಿಗೆ ಹಣ ಜಮೆಯಾಗಲಿದೆ.ಅಭಿಲಾಷ, ಸಿಡಿಪಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net