

ಉಡುಪಿ: ಕಾಂಗ್ರೆಸ್ ಅವಧಿಗೆ ಹೋಲಿಸಿದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪುರಾತತ್ವ ಇಲಾಖೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ. ಅನೇಕ ಸಂದರ್ಭದಲ್ಲಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ ಎಂದು ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ ನಿವೃತ್ತ ಅಧಿಕಾರಿ ಕೆ.ಕೆ. ಮಹಮ್ಮದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸಂಸ್ಕೃತಿಗೆ ಆದ್ಯತೆ ನೀಡುತ್ತದೆ. ಹೀಗಾಗಿ ಇಲಾಖೆಗೆ ಇನ್ನಷ್ಟು ಆದ್ಯತೆ ಲಭಿಸಬಹುದು ಎಂಬುದು ನಮ್ಮ ಆಶಾಭಾವನೆಯಾಗಿತ್ತು. ಆದರೆ ಕಾಂಗ್ರೆಸ್ ಮತ್ತು ವಾಜಪೇಯಿ ಸರ್ಕಾರಗಳಿಗೆ ಹೋಲಿಸಿದರೆ ಈಗಿನ ಕೇಂದ್ರ ಸರ್ಕಾರದಿಂದ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ನಡೆಯುತ್ತಿಲ್ಲ. ಪುರಾತತ್ವ ಇಲಾಖೆಯನ್ನು ಸಕ್ರಿಯಗೊಳಸಬೇಕು. ಉತ್ತಮ ತಂಡ ನೇಮಕ ಮಾಡಬೇಕು. ಇದರಿಂದ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸಲು ಸಾಧ್ಯ’ ಎಂದರು.
ಮುಸ್ಲಿಮರೇ ಹಸ್ತಾಂತರಿಸಬೇಕಷ್ಟೇ: ಕಾಶೀ ಮತ್ತು ಮಥುರಾ ವಿವಾದದ ಬಗ್ಗೆ ಉತ್ತರಿಸಿದ ಕೆ.ಕೆ.ಮಹಮ್ಮದ್, ‘ಕೇಂದ್ರ ಸರ್ಕಾರ 1991ರಲ್ಲಿ ಧಾರ್ಮಿಕ ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಮೂಲಕ ಅಯೋಧ್ಯೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ 1947ರ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ. ಆದರೆ ಮುಸ್ಲಿಮರೇ ಸ್ವ ಇಚ್ಛೆಯಿಂದ ಹಸ್ತಾಂತರ ಮಾಡಬಹುದು. ಅದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ’ ಎಂದರು.
ವಿವಾದಿತ ಜಾಗವಲ್ಲ: ಈಗಲೂ ಅಯೋಧ್ಯೆ ವಿವಾದಿತ ಜಾಗ ಎಂಬ ರಾಜಕಾರಣಿಗಳ ಹೇಳಿಕೆ ಪ್ರತಿಕ್ರಿಯಿಸಿದ ಅವರು, 1996ರಲ್ಲೇ ಉತ್ಖನನ ಮಾಡಿದಾಗ ಮಂದಿರದ ಪುರಾವೆಗಳು ಲಭಿಸಿವೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಮಾನ್ಯ ಮಾಡಿದೆ. ಹೀಗಾಗಿ ರಾಮಜನ್ಮಭೂಮಿ ವಿವಾದಿತ ಜಾಗವಲ್ಲ. ಆದರೆ ಕೆಲವರು ವಿವಾದವನ್ನು ಇನ್ನೂ ಜೀವಂತ ಇಡಲು ಪ್ರಯತ್ನಿಸುತ್ತಿದ್ದಾರೆ. ಯಾಕೆಂದರೆ ಅವರ ಬಳಿ ಬೇರೆ ವಿಷಯಗಳಿಲ್ಲ ಎಂದು ಕೆ.ಕೆ. ಮಹಮ್ಮದ್ ಹೇಳಿದರು.