

ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖೆಯ ಜತೆ ಇತರ ಇಲಾಖೆಗಳು ಸಮುದಾಯದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸಮುದಾಯದ ಜನರಿಗೆ ಮಾಹಿತಿಗಳನ್ನು ನೀಡುವುದೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಕೊರಗ ಸಮುದಾಯದ ಮುಖಂಡ ಸುಂದರ ಹೇಳಿದರು.
ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಅಂಗವಾಗಿ ಮುಂಡಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕೊರಗ ಸಮುದಾಯದ ಜನತೆಗೆ ಸರ್ಕಾರದ ಮೂಲ ದಾಖಲೆಗಳ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರಗ ಸಮುದಾಯ ಮೂಲ ದಾಖಲೆಗಳಿಲ್ಲದೆ ಸೌಲಭ್ಯ ವಂಚಿತವಾಗುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿ ಭವನದಲ್ಲಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿತ್ತು. ಅದರ ಪರಿಣಾಮ ಇದೀಗ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ಮಾತನಾಡಿ, ಮೂಲ ದಾಖಲೆಗಳನ್ನು ಪಡೆಯುವ ನಿಟ್ಟಿನಲ್ಲಿ ಆಧಾರ್, ಪಡಿತರ, ಜಾತಿ ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರದ ಹಲವು ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ರಾಮಣ್ಣ ಶೆಟ್ಟಿ, ಸಮುದಾಯದ ಮುಖಂಡ ಮುಂಡಪ್ಪ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಹೇಮಲತಾ ನಿರೂಪಿಸಿದರು. 20 ಮಂದಿ ಶಿಬಿರದ ಪ್ರಯೋಜನ ಪಡೆದರು. ಕಳೆದ ಜನವರಿಯಲ್ಲಿ ಉಜಿರೆಯಲ್ಲಿ ನಡೆದ ಶಿಬಿರದಲ್ಲಿ ನೋಂದಾಯಿಸಲಾಗಿದ್ದ ದಾಖಲೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.