

ಬೆಂಗಳೂರು ಗ್ರಾಮಾಂತರ: ನಾಲ್ಕು ವರ್ಷದಿಂದ ಖಾಸಗಿ ವ್ಯಕ್ತಿಗಳ ವಾಸಸ್ಥಾನವಾಗಿದ್ದ ಹೊಸಕೋಟೆ ತಾಲೂಕು ದೊಡ್ಡಗಟ್ಟಿಗನಬ್ಬೆ ಗ್ರಾಪಂ ವ್ಯಾಪ್ತಿಯ ಪೂಜೇನ ಅಗ್ರಹಾರದ ಅಂಗನವಾಡಿ ಕಟ್ಟಡ ಕಡೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಬಂದಂತಾಗಿದೆ.
ಡಿ.7ರಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಂಗನವಾಡಿಯನ್ನು ಇಲಾಖೆ ವಶಕ್ಕೆ ಪಡೆಯುವುದರೊಂದಿಗೆ 4 ವರ್ಷದಿಂದ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದ ಪ್ರಹಸನಕ್ಕೆ ಅಂತ್ಯ ಹಾಡಿದ್ದಾರೆ.
ಏನಿದು ಪ್ರಕರಣ: ಇಲಾಖೆಯಿಂದ ನಿರ್ಮಾಣವಾಗಿದ್ದ ಕಟ್ಟಡದಲ್ಲಿ ವೃದ್ಧೆಯೊಬ್ಬರು ವಾಸವಾಗಿದ್ದರು. ಈ ಬಗ್ಗೆ 4 ವರ್ಷದಿಂದ ಜಿಪಂ ಸಭೆಯಲ್ಲಿ ವಿಷಯ ಪ್ರಸ್ತಾಪವಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ. ಆದರೆ ಡಿ.4ರಂದು ನಡೆದ ಸಭೆಯಲ್ಲಿ ಸದಸ್ಯ ಕೆ.ಕೃಷ್ಣಮೂರ್ತಿ ಮತ್ತೊಮ್ಮೆ ವಿಷಯ ಪ್ರಸ್ರಾಪಿಸಿದ್ದರಿಂದ ಕಟ್ಟಡವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುಪರ್ದಿಗೆ ಪಡೆಯುವಂತೆ ಜಿಪಂ ಅಧ್ಯಕ್ಷ ವಿ.ಪ್ರಸಾದ್ ಸೂಚನೆ ನೀಡಿದ್ದರು.
ವೃದ್ಧೆಗೆ ಸೂರಿನ ಭರವಸೆ: ವೃದ್ಧೆಗೆ ತಾತ್ಕಾಲಿಕವಾಗಿ ಸೂರಿನ ವ್ಯವಸ್ಥೆ ಮಾಡಿದ್ದು, ಶೀಘ್ರವೇ ಮನೆ ನಿರ್ಮಿಸಿಕೊಡಲಾಗುವುದು ಎಂದು ಜಿಪಂ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದ್ದಾರೆ. ಕಟ್ಟಡದ್ಲಲಿ ಕೆಲವೊಂದು ದುರಸ್ತಿ ಕೆಲಸಗಳಿವೆ, ಈಗಾಗಲೇ ಕಟ್ಟಡ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದು, ಎರಡ್ಮೂರು ದಿನಗಳಲ್ಲಿ ಅಧಿಕೃತವಾಗಿ ಉದ್ಘಾಟಿಸುವ ಚಿಂತನೆ ಇದೆ. ಗ್ರಾಮದಲ್ಲಿ ಮತ್ತೊಂದು ಅಂಗನವಾಡಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 60 ಮಕ್ಕಳು ಅದೇ ಅಂಗನವಾಡಿಗೆ ಹೋಗಿ ಬರುತ್ತಿದ್ದಾರೆ.
ಜಿಪಂ ಸರ್ವ ಸದಸ್ಯರ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಅಂಗನವಾಡಿಯನ್ನು ಸುಪರ್ದಿಗೆ ಪಡೆಯಲಾಗಿದೆ. ಶೀಘ್ರದಲ್ಲೇ ಕಟ್ಟಡ ಉದ್ಘಾಟಿಸಲಿದ್ದು, ಅಂಗನವಾಡಿ ಉಪಕೇಂದ್ರ ಅಥವಾ ಸೀಶಕ್ತಿ ಭವನವಾಗಿ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗುವುದು. ವಿ.ಪ್ರಸಾದ್, ಜಿಪಂ ಅಧ್ಯಕ್ಷ ಹಲವು ಜಿಪಂ ಸಭೆಗಳಲ್ಲಿ ಕೇಂದ್ರ ಸುಪರ್ದಿಗೆ ಪಡೆಯುವಂತೆ ಒತ್ತಡ ಹೇರಲಾಗಿತ್ತು, ಆದರೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ, ಈಗ ಪ್ರಕರಣ ಸುಖಾಂತ್ಯ ಕಂಡಿದೆ. ಕೆ. ಕೃಷ್ಣಮೂರ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ, ಜಿಪಂ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಟ್ಟಡವು ಇಲಾಖೆಯ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಪುಷ್ಪಾರಾಯ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ