

ಮಡಿಕೇರಿ: ವರ್ಷಕ್ಕೆ ೨ ಬಾರಿಯಾದರೂ ದಂತ ವೈದ್ಯಕೀಯ ತಪಾಸಣೆ ಮಾಡಿದರೆ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ದಂತ ವೈದ್ಯೆ ಡಾ.ಅನುಶ್ರೀ ಸಲಹೆ ನೀಡಿದರು.
ನಿಟ್ಟೆ ವಿಶ್ವವಿದ್ಯಾಲಯಕ್ಕೆ ಒಳಪಡುವ ಎ.ಬಿ.ಶೆಟ್ಟಿ ಜ್ಞಾಪಕಾರ್ಥ ದಂತ ವಿಜ್ಞಾನ ಸಂಸ್ಥೆ ಹಾಗೂ ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ಅಪೊರ್ಚ್ಯುನಿಟಿ ಶಾಲೆಯ ವಿಶೇಷಚೇತನ ಮಕ್ಕಳಿಗೆ ಮಂಗಳವಾರ ಉಚಿತ ದಂತ ಆರೋಗ್ಯ ತಪಾಸಣೆ ನೆರವೇರಿಸಿ ಮಾತನಾಡಿದರು.
ದಂತ ಆರೋಗ್ಯ ಕಾಪಾಡಿಕೊಳ್ಳಲು ೬ ತಿಂಗಳಿಗೆ ಒಂದು ಬಾರಿ ದಂತ ತಪಾಸಣೆ ನಡೆಸುವುದು ಅಗತ್ಯ. ಹಲ್ಲುಗಳಲ್ಲಿ ಸಣ್ಣ-ಪುಟ್ಟ ಕಲೆಗಳಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು. ಸಾಮಾನ್ಯವಾಗಿ ದೈಹಿಕವಾಗಿ ಬಲಹೀನವಿರುವ ವಿಶೇಷಚೇತನ ಮಕ್ಕಳು ತಮ್ಮ ಹಲ್ಲುಗಳನ್ನು ಉಜ್ಜಲು ಹಿಂದೇಟು ಹಾಕುತ್ತಾರೆ. ಸರಿಯಾಗಿ ಹಲ್ಲನ್ನು ಸ್ವಚ್ಛಗೊಳಿಸದ ಕಾರಣ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಇಂತಹ ಮಕ್ಕಳಿಗೆ ವಿದ್ಯುತ್ ಚಾಲಿತ ಟೂತ್‌ಬ್ರಷ್‌ಗಳನ್ನು ನೀಡಬೇಕು. ಇದರ ಮೂಲಕ ಸುಲಭವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದಾಗಿದೆ ಎಂದರು.
ಪುಟ್ಟ ಮಕ್ಕಳು ರಾತ್ರಿ ಮಲಗುವ ಮುನ್ನ ಮಕ್ಕಳ ಹಲ್ಲುಗಳಲ್ಲಿ ಯಾವುದೇ ಹಾಲಿನ ಅಂಶವಿಲ್ಲದಂತೆ ಪೋಷಕರು ಗಮನಹರಿಸಬೇಕು. ಇಲ್ಲದಿದ್ದಲ್ಲಿ ಹಲ್ಲು ಹುಳುಕಾಗುವ ಸಾಧ್ಯತೆಗಳಿವೆ. ಹಲ್ಲಿನ ಆರೋಗ್ಯಕ್ಕೆ ಫ್ಲೋರೈಡ್ ಅಂಶ ಪ್ರಮುಖವಾಗಿದ್ದು, ಕೊಡಗಿನ ನೀರಿನಲ್ಲಿ ಫ್ಲೋರೈಡ್ ಅಂಶ ಕಡಿಮೆ ಇರುವ ಕಾರಣ ೪ ರಿಂದ ೫ ವರ್ಷದ ಮಕ್ಕಳಿಗೆ ಫ್ಲೋರೈಡ್ ವೃದ್ಧಿಸುವ ಚಿಕಿತ್ಸೆ ದಂತ ವೈದ್ಯರಿಂದ ಪಡೆದುಕೊಳ್ಳಬೇಕು. ಪ್ಲೋರೈಡ್ ಅಂಶವುಳ್ಳ ಟೂತ್‌ಪೇಸ್ಟ್ ಗಳನ್ನು ಬಳಸಬೇಕು. ಮಕ್ಕಳು ೫ ರಿಂದ ೧೬ ವರ್ಷದವರೆಗೆ ವರ್ಷಕ್ಕೆ ೨ ಬಾರಿ ಫ್ಲೋರೈಡ್ ಚಿಕಿತ್ಸೆ ಪಡೆದುಕೊಳ್ಳುವಂತೆ ಡಾ.ಅನುಶ್ರೀ ಸಲಹೆ ನೀಡಿದರು.
ಶಿಬಿರದಲ್ಲಿ ಒಟ್ಟು ೬೦ ವಿಶೇಷಚೇತನ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ನಡೆಸಿದರು. ಈ ಸಂದರ್ಭ ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲಾ, ಪತ್ರಕರ್ತ ಬಿ.ಜಿ.ಅನಂತಶಯನ, ಅಪೊರ್ಚ್ಯುನಿಟಿ ಶಾಲೆಯ ಪ್ರಾಂಶುಪಾಲೆ ಗೀತಾ ಇದ್ದರು.