ವ್ಯಾಪಾರೀಕರಣವಾಗುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರ: ಬಿಜೆಪಿ ಮಾಜಿ ನಗರಾಧ್ಯಕ್ಷ ಅರವಿಂದ್ ಬೇಸರ

Dental check-up camp Mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ವಿಪರೀತ ವ್ಯಾಪಾರೀಕರಣಗೊಳ್ಳುತ್ತಿದೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಬೇಸರ ವ್ಯಕ್ತಪಡಿಸಿದರು.

ನಗರದ ಪೊಲೀಸ್ ಕಾಲನಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಮತ್ತು ಸಾಹಿತ್ಯ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ದಂತ ಉಚಿತ ಚಿಕಿತ್ಸಾ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದಿಂದ ಸೌಲಭ್ಯಗಳು ಸಿಗುವ ಸಾಕಷ್ಟು ಸೇವಾ ಕ್ಷೇತ್ರಗಳು ವ್ಯಾಪರೀಕರಣಗೊಂಡಿವೆ. ಅದರಲ್ಲೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವಂತೂ ಕಾರ್ಪೋರೇಟ್‌ಗಿಂತಲೂ ಹೆಚ್ಚಿನ ಮಟ್ಟದಲ್ಲಿ ದುಬಾರಿಯಾಗುತ್ತಿದೆ ಎಂದರು.

ದಿನೇ ದಿನೆ ಹೆಚ್ಚಾಗುತ್ತಿರುವ ಡೆಂಘೆ ಜ್ವರದ ಅಪಾಯದಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿದರೆ ಸಾಲದು. ಕೋವಿಡ್-19ರ ಮಾದರಿಯಲ್ಲಿ ಆರೋಗ್ಯ ರಕ್ಷಣೆ ಚಟುವಟಿಕೆಗಳು ಸಾಗಬೇಕು. ಸ್ವಚ್ಛತೆ, ಔಷಧ ಸಿಂಪಡಣೆ, ಉಚಿತವಾಗಿ ರಕ್ತ ಪರೀಕ್ಷೆ, ಆರೋಗ್ಯ ಸೌಲಭ್ಯಗಳು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ದಂತವೈದ್ಯೆ ಡಾ.ಕೆ.ಎಲ್.ಸುಕನ್ಯಾ ಮಾತನಾಡಿ, ಪ್ರತಿ ಮಗುವಿಗೂ ಹಾಲುಹಲ್ಲುಗಳು ಬಿದ್ದು ಮತ್ತೆ ಹುಟ್ಟುತ್ತವೆ. 2ನೇ ಬಾರಿ ಹುಟ್ಟ ಹಲ್ಲುಗಳೇ ಶಾಶ್ವತ. ಇವುಗಳನ್ನು ಜೀವಿತದ ಕೊನೆಹೊರೆಗೂ ಜೋಪಾನ ಮಾಡಬೇಕು. ಪ್ರತಿದಿನ ಬೆಳಗ್ಗೆ ಮತ್ತು ಮಲಗುವ ಮುನ್ನ ಹಲ್ಲು ಉಜ್ಜಬೇಕು. ಮಕ್ಕಳ ಹಲ್ಲುಗಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಹುಳುಕು, ವಕ್ರ, ಏರುಪೇರು ಹಲ್ಲುಗಳು ಕಂಡುಬಂದ ತಕ್ಷಣ ದಂತವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ನುಡಿದರು.

ಸಾಹಿತ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ಜೆ.ಸುಜಾತಾ ಕೃಷ್ಣ ಮಾತನಾಡಿ, ಮನುಷ್ಯನಿಗೆ ನಿಜವಾದ ಆಭರಣ ನಗು. ಮುಖದ ಸೌಂದರ್ಯ ಹೆಚ್ಚಾಗಲು ಹಲ್ಲುಗಳು ಕಾರಣ. ಆಹಾರವನ್ನು ಅಗಿದು-ಜಿಗಿದು ತಿನ್ನುವುದಕ್ಕೆ ಹಲ್ಲುಗಳು ಸಹಕಾರಿ. ಅವುಗಳ ಆರೋಗ್ಯ ಕಾಪಾಡಿಕೊಂಡರೆ ಆಯಸ್ಸು ವೃದ್ದಿ. ಹಲ್ಲಿದ್ದರೂ ಆಹಾರ ಪದಾರ್ಥಗಳನ್ನು ಅಗಿಯದೇ ನುಂಗುವುದರಿಂದ ಸಾಕಷ್ಟು ಪೋಷಕಾಂಶಗಳು ಜೀರ್ಣವಾಗುವುದಿಲ್ಲ ಎಂದು ಕಿವಿಮಾತೇಳಿದರು.

ದಂತ ವೈದ್ಯೆ ಡಾ.ರೂಪಾ, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೊತೇರ ಮಹದೇವು, ಮೈಸೂರು ಜಿಲ್ಲಾಧ್ಯಕ್ಷೆ ಮಂಜುಳಾ, ಮುಖ್ಯಶಿಕ್ಷಕಿ ಬಿ.ಎಸ್.ಜಯಲಕ್ಷ್ಮಮ್ಮ, ಶಿಕ್ಷಕ ಸುರೇಶ್, ಸಾಹಿತ್ಯ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಉಮಾ, ಮಂಗಳವಾದ್ಯ ಕಲಾವಿದರಾದ ಕುಮಾರ್, ಲಕ್ಷ್ಮಣ, ಪ್ರಕಾಶ್, ಕಾಂತರಾಜು, ಸೋಮಚಾರ್ ಮತ್ತಿತರರಿದ್ದರು. ಇದೇ ಸಂಧರ್ಭದಲ್ಲಿ ದಂತವೈದ್ಯರು ವಿದ್ಯಾರ್ಥಿಗಳ ದಂತ ಆರೋಗ್ಯ ತಪಾಸಣೆ ನಡೆಸಿ ಸಲಹೆ ಮಾರ್ಗದರ್ಶನ ನೀಡಿದರು. ಅಂತೆಯೇ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net