

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಾಮಾಜಿಕ ಜಾಲತಾಣದಲ್ಲಿ ಜೈನ್ ಧರ್ಮದ ಇತಿಹಾಸ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ನಿರಂತರವಾಗಿ ದಾಳಿ ನಡೆಯುತ್ತಿರುವುದನ್ನು ಖಂಡಿಸಿ ಉಗ್ರ ಹೋರಾಟ ಕೈಗೊಳ್ಳಲು ಆ. 10ರಂದು ಇಲ್ಲಿಯ ನವಗ್ರಹ ತೀರ್ಥ ಕ್ಷೇತ್ರದಲ್ಲಿ ರಾಜ್ಯದ ವಿವಿಧೆಡೆಯ ಜೈನ್ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.
ವರೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲ ಕಿಡಿಗೇಡಿಗಳು ಜೈನ್ ಸಮಾಜದ ರಾಜ-ಮಹಾರಾಜರು ಅತ್ಯಾಚಾರಿಗಳಾಗಿದ್ದರು. ಮಹಿಳೆಯರ ಮೇಲೆ ದೌರ್ಜನ್ಯ, ದೂರಾಚಾರ ನಡೆಸಿದ್ದರು ಎಂದು ಬಿಂಬಿಸುತ್ತಿದ್ದಾರೆ. ಇದು ಅಕ್ಷಮ್ಯವಾದುದು. ಜೈನ್ ಸಮಾಜದ ರಾಜ-ಮಹಾರಾಜರು, ದಾರ್ಶನಿಕರು, ಸಾಹಿತಿಗಳು, ಭಾಷಾ ತಜ್ಞರು ದೇಶದ ಸಾಹಿತ್ಯ, ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಜೈನ್ ಸಮಾಜದ ರಾಜ-ಮಹಾರಾಜರು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿರುವ ಒಂದೇ ಒಂದು ಪ್ರಕರಣವು ‘ಕರ್ನಾಟಕ ಜೈನ್ ಶಾಸನಗಳು’ ಎಂಬ ಗ್ರಂಥದಲ್ಲಿ ಉಲ್ಲೇಖವಿಲ್ಲ. ರಾಜ್ಯದಲ್ಲಿ ಸಮಾಜದ ಮೇಲೆ ನಡೆಯುತ್ತಿರುವ ದಾಳಿ ನಮಗೆಲ್ಲ ತೀವ್ರತರ ನೋವು ತಂದಿದೆ. ಇಂಥ ಕಿಡಿಗೇಡಿಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವ ಬಗ್ಗೆ ವರೂರಿನಲ್ಲಿ ಆ. 5ರಂದು ಜೈನ್ ಸಮಾಜದ ಮುಖಂಡರ ತಾಲೂಕು ಮಟ್ಟದ ಹಾಗೂ ಆ. 10ರಂದು ರಾಜ್ಯ ಮಟ್ಟದ ಸಭೆ ಕರೆದಿದ್ದೇವೆ. ಚಾತುರ್ವಸ್ಯ ವ್ರತದಲ್ಲಿರುವುದರಿಂದ ನಾನು ನೇರವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು.
ಎಸ್ಐಟಿ ತನಿಖೆ ಬೇಗ ಮುಗಿಯಲಿ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆಯೆಂಬ ಆರೋಪದ ಪ್ರಕರಣದಲ್ಲಿ ್ಚಡೆಸಲಾಗುತ್ತಿರುವ ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತಿವೆ. ಇಲ್ಲಿ ನಮಗೆ ಎಸ್ಐಟಿ ಹಾಗೂ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿದೆ. ಆದರೆ, ತನಿಖೆ ಬೇಗ ಮುಗಿಯಬೇಕು ಎಂಬುದು ನಮ್ಮ ಆಶಯ. ಈ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ಹೀಗೆಲ್ಲ ನಡೆಯುತ್ತಿರುವುದು ನಮಗೆ ಬೇಸರ ತಂದಿದೆ. ತನಿಖೆ ವಿಳಂಬವಾಗಿ ಮುಂದಿನ ವರ್ಷದ ಶ್ರಾವಣ ಮಾಸವನ್ನು ನಾವು ಹೀಗೆ ಕಳೆಯುವಂತಾಗಬಾರದು ಎಂದು ಆಶಿಸಿದರು.