ಸನಾತನ ಧರ್ಮದ ಅವಹೇಳನ ಸಲ್ಲ

krishna
ವಿಜಯಪುರ ನಗರದ ದರಬಾರ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದ ತಂಡ.
Published on

ವಿಜಯಪುರ: ಸನಾತನ ಧರ್ಮ ಹಾಗೂ ಹಿಂದೂ ದೇವತೆಗಳ ಅವಹೇಳನ ಮಾಡುವ ಸಂಸ್ಕೃತಿ ಅಧಿಕವಾಗುತ್ತಿದೆ. ಇಂಥವರಿಗೆ ಪ್ರತ್ಯುತ್ತರ ನೀಡಲು ಹಿಂದು ಯುವ ದೇಶ ರಕ್ಷಕರ ಪಡೆ ಸಮರ್ಥವಾಗಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವಿಜಯಪುರ ಜಿಲ್ಲಾ ಸಂಚಾಲಕ ಡಾ. ಬಾಬು ರಾಜೇಂದ್ರ ನಾಯಿಕ ಹೇಳಿದರು.

ನಗರದ ದರಬಾರ ಶಾಲೆ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ತುಳಸಿಗಿರೀಶ ಫೌಂಡೇಶನ್ ಹಾಗೂ ದೇಶ ರಕ್ಷಕರ ಪಡೆ, ವಿಜಯಪುರ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಮುದ್ದುಕೃಷ್ಣ ಹಾಗೂ ರಾಧಾ ವೇಷಧಾರಿ ಮಕ್ಕಳ ಸ್ಪರ್ಧೆ ಮತ್ತು ಮೊಸರು ಗಡಿಗೆ ಒಡೆಯುವ ಸ್ಪರ್ಧೆಯ ಆಯೋಜಕರಾಗಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಮಾತೆಯ ನೀರು ಕುಡಿದು, ನಮ್ಮ ಸನಾತನ ಧರ್ಮದ ಬಗ್ಗೆ, ಮರ್ಯಾದಾ ಪುರುಷೋತ್ತಮ ರಾಮನ ಬಗ್ಗೆ, ದೇವತೆಗಳ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡುವವರನ್ನು ಹಿಮ್ಮೆಟ್ಟಿಸುವ ಛಾತಿ ನಮ್ಮ ಹಿಂದು ಯುವ ದೇಶ ರಕ್ಷಕರ ಪಡೆಗಿದೆ. ಅವರಿಗೆ ಕ್ಷತ್ರೀಯರಂತೆ ಖಡ್ಗ ಎತ್ತುವುದೂ ಗೊತ್ತು, ಸಹಬಾಳ್ವೆಯಿಂದ ಬಾಳುವುದೂ ಗೊತ್ತು ಎಂದ ಅವರು, ಪ್ರತಿಯೊಬ್ಬ ಭಾರತೀಯನೂ ಹಿಂದೂ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.
ಕನ್ನಾಳದಲ್ಲಿರುವ ಶಾಂತಿಕುಟೀರದ ಶ್ರೀಕೃಷ್ಣ ಗುರೂಜಿ ಸಾನಿಧ್ಯ ವಹಿಸಿದ್ದರು. ಲಿಂಗಸುಗೂರು ವಿಜಯಮಹಾಂತೇಶ ಶಾಖಾಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಖ್ಯಾತ ಹಾಸ್ಯ ವಾಗ್ಮಿ ಗಂಗಾವತಿ ಪ್ರಾಣೇಶ, ಗಣ್ಯಮಾನ್ಯರಿದ್ದು, ಕೃಷ್ಣ ವೇಷಧಾರಿ ಪುಟಾಣಿಗಳು ಹಾಗೂ ಮೊಸರು ಗಡಿಕೆ ಒಡೆಯುವ ಯುವಕ, ಯುವತಿಯರ ಪಡೆಯನ್ನು ಹುರಿದುಂಬಿಸಿದರು.

ಕೃಷ್ಣ ಮತ್ತು ರಾಧಾ ವೇಷಧಾರಿ ಮಕ್ಕಳು ವೇದಿಕೆ ಮೇಲೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ವಿಜೇತ ಸ್ಪರ್ಧಾಳು ಮಕ್ಕಳಿಗೆ ವೇದಿಕೆ ಮೇಲೆ ಉಪಸ್ಥಿತರಿದ್ದ ಗಂಗಾವತಿ ಪ್ರಾಣೇಶ ಪ್ರಶಸ್ತಿ ವಿತರಿಸಿದರು. ಮೊಸರು ಗಡಿಗೆ ಒಡೆಯಲು ಭಾಗವಹಿಸಿದ್ದ ಐದಾರು ತಂಡದಲ್ಲಿ ಒಂದು ಮಹಿಳಾ ತಂಡ ಪಾಲ್ಗೊಂಡು ಗಮನಸೆಳೆಯಿತು.

ಮಹಾನಗರಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ್ ಗೋಸಾವಿ, ರಾಜು ಕುರಿಯವರ, ವಿಠ್ಠಲ ಹೊಸಪೇಟೆ, ಸುನಿತಾ ಒಡೆಯರ್, ಚಂದ್ರು ಚೌಧರಿ ವೇದಿಕೆಯಲ್ಲಿದ್ದರು. ಗಣ್ಯ ವ್ಯಕ್ತಿಗಳು, ಕೃಷ್ಣ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net