ಗುಡ್ಡೆಮನೆ ಅಪ್ಪಯ್ಯ ಗೌಡರ ಅವಹೇಳನ ಸರಿಯಲ್ಲ

gowda yuva vedike
Published on

ಮಡಿಕೇರಿ: ಕೊಡಗು ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಧರ್ಮ, ಜಾತಿಗಳನ್ನು ಮೀರಿದ ಬಾಂಧವ್ಯವಿದೆ. ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರು ಕೊಡಗಿನ ಅಸ್ಮಿತೆಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರೇ ಇರಲಿ, ದೇಶಕಾಯುವ ವೀರ ಸೇನಾನಿಗಳೇ ಇರಲಿ ಯಾರಿಗೂ ಅವಮಾನವಾದರೂ ಅದು ಇಡೀ ಕೊಡಗಿನ ಜನತೆಗೆ ಅವಮಾನವಾದಂತೆ ಎಂದು ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಒಬ್ಬ ಅನಾಮಿಕ ಎಂದು ದುರುದ್ದೇಶದಿಂದ ಸುಳ್ಳು ಹೇಳುವ ಮೂಲಕ ಕೊಡಗಿನ ಜನ ಸಮುದಾಯದ ನಡುವೆ ಶಾಂತಿ ಕದಡುವ ಪ್ರಯತ್ನವನ್ನು ಕೆಲವರು ಮಾಡಿದ್ದರು. ಆದರೆ, ನ್ಯಾಯಾಲಯದಲ್ಲಿ ಇವರಿಗೆ ಸರಿಯಾದ ಉತ್ತರ ದೊರೆತ್ತಿದ್ದು, ಯುವ ವೇದಿಕೆ ಇದನ್ನು ಸ್ವಾಗತಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರು ಕೊಡಗಿನ ಅಸ್ಮಿತೆಯಾಗಿದ್ದು, ಅವರು ೧೮೩೭ರ ಕೊಡಗು-ಕೆನರಾ ಬ್ರಿಟಿಷ್ ವಿರೋಧಿ ಯುದ್ಧದ ಪ್ರಮುಖ ನಾಯಕರು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಗಲ್ಲಿಗೆ ಹಾಕಿದ ದಿನಾಂಕದ ನಿಕರ ವಿವರ ಕಾಟನ್ ವರದಿಯಲ್ಲಿದೆ. ವಿವಿಧ ಜಾತಿಗಳಿಗೆ ಸೇರಿದ ೧೮೩೭ರ ಹೋರಾಟದ ಕ್ರಾಂತಿಕಾರವೀರರಿಗೆ ಅವಮಾನ ಮಾಡುವುದರ ಮೂಲಕ ಸಮುದಾಯದ ಜನರಿಗೆ ಅಪಮಾನ ಮಾಡಿ ಕೊಡಗಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವುದು ಕೆಲವು ಸಮಾಜ ವಿರೋಧಿ ವ್ಯಕ್ತಿಗಳ ದಿನನಿತ್ಯದ ಕೆಲಸವಾಗಿದೆ. ಕೊಡಗಿನ ಹೆಮ್ಮೆಯ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಈ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರೆ ಕೊಡಗು ಗೌಡ ಯುವ ವೇದಿಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ಅಪ್ಪಯ್ಯ ಗೌಡರ ವಿಷಯವನ್ನು ಪಠ್ಯಪುಸ್ತಕಕ್ಕೆ ಮರು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಅಪ್ಪಯ್ಯ ಗೌಡರ ಹುತಾತ್ಮ ದಿನದಂದು ಯುವ ವೇದಿಕೆ ಶಾಸಕರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಆಡಳಿತ ವ್ಯವಸ್ಥೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಯುವ ವೇದಿಕೆಯ ಸಹ ಕಾರ್ಯದರ್ಶಿ ಕೆದಂಬಾಡಿ ಕಾಂಚನ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವ ಕಿಡಿಗೇಡಿಗಳಿಗೆ ಕಾನೂನು ಕ್ರಮದ ಮೂಲಕ ಪಾಠ ಕಲಿಸಲಿದ್ದೇವೆ. ದೇಶ ಪ್ರೇಮಿಗಳ ಮೇಲಿನ ಗೌರವ ಎಲ್ಲಾ ಜಾತಿ, ಧರ್ಮಗಳ ಗಡಿಮೀರಿ ನಿಲ್ಲಬೇಕು ಎಂಬುವುದೇ ನಮ್ಮ ಆಶಯ ಎಂದು ತಿಳಿಸಿದರು.

ಕಾನೂನು ಸಲಹೆಗಾರ ಕೊಂಬಾರನ ರೋಷನ್ ಮಾತನಾಡಿ, ಮಡಿಕೇರಿ ನಗರದ ಕೋಟೆ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ ಸ್ಥಾಪಿಸುವ ಕುರಿತು ಜಿಲ್ಲಾಡಳಿತ ಮತ್ತು ಪ್ರಾಶ್ಚ್ಯವಸ್ತು ಇಲಾಖೆಯ ಗಮನ ಸೆಳೆದು ಅಗತ್ಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್ ಹಾಗೂ ಶಿಸ್ತು ಸಮಿತಿಯ ಅಧ್ಯಕ್ಷ ನವೀನ್ ದೇರಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net