ವ್ಯಾಪಕವಾಗಿ ಸೊಳ್ಳೆಗಳ ಉತ್ಪತ್ತಿ, ವಿವಿಧೆಡೆ ಡೆಂಘೆ ಪ್ರಕರಣಗಳ ಹೆಚ್ಚಳ

11CBP4
Published on

ಚಿಕ್ಕಬಳ್ಳಾಪುರ: ವ್ಯಾಪಕವಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳದಿಂದ ಜಿಲ್ಲೆಯ ವಿವಿಧೆಡೆ ಡೆಂಘೆ ಪ್ರಕರಣಗಳು ವರದಿಯಾಗುತ್ತಿದ್ದು ಅನಾರೋಗ್ಯಕ್ಕೆ ಗುರಿಯಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ರಾಜ್ಯಾದ್ಯಂತ ಹಾವಳಿ ಕಾಡುತ್ತಿರುವುದರ ನಡುವೆ ಈ ಭಾಗದಲ್ಲೂ ಕಾಯಿಲೆಯು ಬಾಧಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 78 ಪ್ರಕರಣಗಳು ದೃಢಪಟ್ಟಿದ್ದು ಆರೋಗ್ಯ ಇಲಾಖೆಯು ಅಲಾರ್ಟ್ ಆಗಿದೆ. ಈಗಾಗಲೇ ಮನೆ ಮನೆ ಸಮೀಕ್ಷೆ, ನೀರಿನಲ್ಲಿ ಲಾರ್ವಾ ಪರೀಕ್ಷೆ, ಪರಿಹಾರ ಕ್ರಮಗಳು, ಚಿಕಿತ್ಸೆ ಮತ್ತು ಜಾಗೃತಿ ಸೇರಿದಂತೆ ನಾನಾ ಚಟುವಟಿಕೆಯನ್ನು ಬಿರುಸುಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗದೇ ಬರದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಆಗಾಗ ಸುರಿದ ಮಳೆ, ತ್ಯಾಜ್ಯದ ರಾಶಿ, ಕಲುಷಿತ ನೀರು, ಅನೈರ್ಮಲ್ಯದಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದರಿಂದ ಡೆಂಘೆ, ಚಿಕುಂಗುನ್ಯಾ ಸೇರಿ ನಾನಾ ಕಾಯಿಲೆಗಳು ಕಂಡು ಬರುತ್ತಿವೆ. ಇದಕ್ಕೆ ಮುಂಜಾಗ್ರತಾ ಕ್ರಮಗಳ ಪಾಲನೆ, ಉತ್ತಮ ಸ್ವಚ್ಛತೆ ನಿರ್ವಹಣೆಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬ ಸಲಹೆ ನೀಡಲಾಗುತ್ತಿದೆ.

ಇತ್ತೀಚೆಗೆ ಜನರಿಗೆ ಚಳಿ ಜ್ವರ, ಕೈ ಕಾಲು ನೋವು, ನೆಗಡಿ, ವಾಂತಿ ಭೇದಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಇದರಿಂದ ಜನರು ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಮುಗಿ ಬೀಳುತ್ತಿದ್ದಾರೆ. ಜ್ವರಕ್ಕೆ ತುತ್ತಾಗಿ ಬರುವ ಪ್ರತಿ ರೋಗಿಗೆ ವೈದ್ಯರು ಮುಂಜಾಗ್ರತಾ ಕ್ರಮವಾಗಿ ರಕ್ತಪರೀಕ್ಷೆಗೆ ಹೆಚ್ಚು ಶಿಫಾರಸು ಮಾಡುತ್ತಿದ್ದಾರೆ.

*ಅನೈರ್ಮಲ್ಯದ ಸಮಸ್ಯೆ

ಚರಂಡಿಗಳಲ್ಲಿ ತ್ಯಾಜ್ಯ ಸಮೇತ ನೀರು ನಿಂತುಕೊಂಡಿದ್ದು ಇದೇ ವೇಳೆ ವಿವಿಧ ಬಡಾವಣೆಗಳಲ್ಲಿ ಚರಂಡಿಯ ನೀರು ಕುಡಿಯುವ ನೀರಿನ ಪೈಪ್ ಲೈನ್ ಗಳಿಗೆ ಮಿಶ್ರಣವಾಗುತ್ತಿರುವ ಆತಂಕ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಸ್ಥಳೀಯ ಆಡಳಿತ ಸಂಸ್ಥೆಗಳು ಕಾಲ ಕಾಲಕ್ಕೆ ಚರಂಡಿಗಳ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಳ್ಳದಿರುವುದು ಮತ್ತು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕದಿರುವುದು ಹೆಚ್ಚಿಗೆ ಜನರು ಅನಾರೋಗ್ಯಕ್ಕೆ ಗುರಿಯಾಗಲು ಪ್ರಮುಖ ಕಾರಣವಾಗಿದೆ.

*ಕಾಯಿಲೆಯ ಲಕ್ಷಣಗಳು

ಡೆಂಘೆ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ. ಸೋಂಕು ಹೊಂದಿದ ಈಡೀಸ್ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರನೋವು, ಮಾಂಸಖಂಡಗಳಲ್ಲಿ ಮತ್ತು ಕೀಲುಗಳಲ್ಲಿ ವಿಪರೀತ ನೋವು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.

*ಆರೋಗ್ಯ ಇಲಾಖೆ ಸೂಚನೆ

ಡೆಂಘೆ, ಚಿಕುನ್ ಗುನ್ಯಾ, ವಿಷಮಶೀತ ಜ್ವರ ಸೇರಿದಂತೆ ಯಾವುದೇ ಕಾಯಿಲೆಗಳ ಬಗ್ಗೆ ಆತಂಕ ಬೇಡ. ಆದರೆ, ಜಾಗೃತರಾಗಿರಬೇಕು. ಅನಾರೋಗ್ಯ ಸಮಸ್ಯೆ ಕಂಡು ಬಂದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಪ್ರಮುಖವಾಗಿ ಸೊಳ್ಳೆಗಳ ನಿಯಂತ್ರಣ ಮುಖ್ಯ. ಇದಕ್ಕೆ ಮನೆಗಳಲ್ಲಿ ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿರುವ ತೊಟ್ಟಿಗಳು, ಡ್ರಮ್‌ಗಳು, ಬ್ಯಾರಲ್, ಮಣ್ಣಿನ ಮಡಿಕೆ ಸೇರಿದಂತೆ ಇತರೆಡೆ ಶೇಖರಣೆಯಾಗುವ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.

*ಚೆನ್ನಾಗಿ ಊಟ ಸೇವಿಸಿದರೂ ಸುಸ್ತು, ಕೈಕಾಲು ನೋವು, ಕಣ್ಣುಗಳಲ್ಲಿ ಚುಚ್ಚಿದ ಅನುಭವ, ಚಳಿಚಳಿ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ. ವೈದ್ಯರ ಬಳಿ ಚಿಕಿತ್ಸೆ ಪಡೆಯಲಾಗುತ್ತಿದೆ. ಡೆಂಘೆ ಶಂಕೆ ಮೂಡಿದೆ.

ಮುನಿರಾಜು, ವೈದ್ಯ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net