ಜಿಲ್ಲೆಯಲ್ಲಿ ಡೆಂಘೆ ಇಳಿಮುಖ

19 ckm 1 dr.ashwath babu dho
ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಡಿಎಚ್ ಒ ಅಶ್ವಥ್ ಬಾಬು ಮಾತನಾಡಿದರು.
Published on

ಚಿಕ್ಕಮಗಳೂರು: ಜುಲೈ ತಿಂಗಳ ವೇಳೆಗೆ ಡೆಂಘೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಜನವರಿ ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ 630 ಡೆಂಘೆ ಪ್ರಕರಣಗಳು ಕಂಡು ಬಂದಿದ್ದು, ಪ್ರಸ್ತುತ 26 ಜನ ಮಾತ್ರ ಡೆಂಘೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಡೆಂಘೆ ಸಂಪೂರ್ಣವಾಗಿ ಹತೋಟಿಗೆ ಬಂದಿದೆ ಎಂದು ಡಿಎಚ್ ಒ ಅಶ್ವಥ್ ಬಾಬು ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಡೆಂಘೆಯಿಂದ ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ಮಾಹಿತಿ ನೀಡಿದರು.
ಡೆಂಗೆ ಕಂಡುಬಂದ ಸಮಸ್ಯಾತ್ಮಕ ನಗರ ಮತ್ತು ಹಳ್ಳಿಗಳಲ್ಲಿ ನಿರಂತರವಾಗಿ ಲಾರದವ ಸಮೀಕ್ಷೆ ಮಾಡಲಾಗುತ್ತಿದೆ. ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ್ಯ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರ ಕಾರ್ಯತಂಡ ರಚಿಸಿಕೊಂಡು ಡೆಂಘೆ ಕಾಣಿಸಿಕೊಂಡ ಹಳ್ಳಿಗಳಿಗೆ ತೆರಳಿ ಮುಂಜಾಗ್ರತ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಒಂದು ಗ್ರಾಮ ಅಥವಾ ನಗರ ವ್ಯಾಪ್ತಿಯಲ್ಲಿ 100 ಮೀಟರ್ ಒಳಗೆ ಒಂದು ಹಾಗೂ ಅದಕ್ಕಿಂತ ಹೆಚ್ಚು ಡೆಂಘೆ ಪ್ರಕರಣಗಳು ವರದಿಯಾದಲ್ಲಿ, ಅದನ್ನು ಹಾಟ್ ಸ್ಪಾಟ್ ಎಂದು ಘೋಷಿಸಲಾಗುತ್ತದೆ. ಬಳಿಕ ಸ್ಥಳೀಯ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಆ ಸ್ಥಳದ ಮೇಲೆ ನಿಗಾವಹಿಸುವಂತೆ ಸೂಚನೆ ನೀಡುವ ಜೊತೆಗೆ ಫೀವರ್ ಕ್ಲಿನಿಕ್ ತೆರೆಯಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಹರೀಶ್ ಬಾಬು, ಡಾ. ಮಂಜುನಾಥ್, ಡಾ.ಬಾಲಕೃಷ್ಣ ಉಪಸ್ಥಿತರಿದ್ದರು.

ಕಂಟ್ರೋಲ್ ರೂಂ ಸ್ಥಾಪನೆ
ಜಿಲ್ಲೆಯಲ್ಲಿ ಡೆಂಘೆಯನ್ನು ಪರಿಣಾಮಕಾರಿಯಾಗಿ ತಡೆಯಲು ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ಯಾರಿಗೆ ಜ್ವರ ಇದೆಯೋ ಅವರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 9448907909ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆಗ ನಮ್ಮ ಸಿಬ್ಬಂದಿ ಅವರ ಮನೆಗೇ ತೆರಳಿ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯವಿದ್ದರೆ ಆಸ್ಪತ್ರೆಗೆ ಕರೆತರಲಾಗುವುದು ಎಂದು ಡಿಎಚ್ ಒ ಡಾ. ಅಶ್ವಥ್ ಬಾಬು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣದಿಂದಾಗಿ ಕೆಲವರು ಜ್ವರ ಬಂದರು ಮಳೆಯಲ್ಲಿ ಆಸ್ಪತ್ರೆಗೆ ಬರುವುದಿಲ್ಲ. ಅಂಥವರಿಗೂ ಸಿಕ್ತ ಚಿಕಿತ್ಸೆ ನೀಡಿ ಡೆಂಘೆ ತಡೆಯುವ ಉದ್ದೇಶದಿಂದ ಕಂಟ್ರೋಲ್‌ ರೂಂ ಆರಂಭಿಸಲಾಗಿದೆ. ದಿನದ 24 ಗಂಟೆಯೂ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಇಲಿ ಜ್ವರದ ಬಗ್ಗೆ ಮುಂಜಾಗ್ರತೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಲಿ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಲಿ ಜ್ವರದ ಬಗ್ಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಂಡು ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಮಂಜುನಾಥ್ ತಿಳಿಸಿದರು.
ಇಲಿ ಜ್ವರ ಸೊಳ್ಳೆಗಳು ಕತ್ತುವುದರಿಂದ ಬರುವುದಿಲ್ಲ ಬದಲಿಗೆ ನೀರಿನಲ್ಲಿ ಇಲಿಗಳ ಮೂತ್ರ ಹಾಗೂ ಹಿಕ್ಕೆಗಳು ಸೇರಿಕೊಂಡಾಗ ಆ ನೀರಿನಲ್ಲಿ ಓಡಾಡುವುದರಿಂದ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಕ್ಕಳಿಗೆ, ವಯಸ್ಕರಿಗೆ ಹಾಗೂ ಗರ್ಭಿಣಿಯರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಲಿ ಜ್ವರ ಮಾತ್ರವಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವುಗಳು ಹೊರಬರುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸೂಕ್ತ ಔಷಧ ದಾಸ್ತಾನು ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಸೇರಿ ವಾಂತಿಭೇದಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಈ ಬಗ್ಗೆಯೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net