ಉಡುಪಿ ಜಿಲ್ಲೆಯಲ್ಲಿ ನಿಲ್ಲದ 'ಡೆಂಘೆ' ಡಂಗುರ

UDP-30-1-Dengue
'ಈಡೀಸ್ ಇಜಿಪ್ಟ್ಟೆ'ಸೊಳ್ಳೆ.
Published on

ನಿಯಂತ್ರಣಕ್ಕೆ ಸಿಗದ ಕಾಯಿಲೆ | ಹತೋಟಿಯಲ್ಲಿ ಮಲೇರಿಯಾ ರೋಗ

  • ಸದ್ದಿಲ್ಲದೆ ಮಲಗಿದೆ ಮಿದುಳು ಜ್ವರ

ಪ್ರಶಾಂತ ಭಾಗ್ವತ, ಉಡುಪಿ
ಸುಂದರ ಪ್ರವಾಸಿ ತಾಣ ಹಾಗೂ ಬಹು ಮಂದಿರಗಳ ನಾಡು ಉಡುಪಿ ಜಿಲ್ಲೆಯಲ್ಲಿ ಡೆಂಘೆ ಕಾಯಿಲೆಯ ಡಂಗುರಕ್ಕೆ ಕಡಿವಾಣ ಸಾಧ್ಯವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಡೆಂಘೆ ಪ್ರಕರಣ ಹೆಚ್ಚುತ್ತಲೇ ಇದ್ದು, ಕರಾವಳಿಯ ಸೊಬಗಿಗೆ ಕಪ್ಪುಚುಕ್ಕೆ ಇಟ್ಟಂತಾಗಿದೆ.

ಆರೋಗ್ಯ ಇಲಾಖೆಯ ಅನೇಕ ಮುಂಜಾಗ್ರತಾ ಕ್ರಮದಿಂದಾಗಿ ಮಲೇರಿಯಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವುದು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ. 2019-20ರಲ್ಲಿ 6 ಜನರ ಬಲಿ ಪಡೆದಿದ್ದ ಮಿದುಳು ಜ್ವರ ಸದ್ಯ ಸದ್ದಿಲ್ಲದೆ ಮಲಗಿದ್ದು, ಚಿಕೂನ್​ಗುನ್ಯಾ ಕಣ್ಮರೆಯಾಗಿದೆ.

164 ಡೆಂಘೆ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ 2024ರ ಜೂನ್​ 25ರ ವರೆಗೆ 164 ಡೆಂಘೆ ಪ್ರಕರಣ ದಾಖಲಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಉಡುಪಿ ತಾಲೂಕಿನಲ್ಲಿ 102 ಡೆಂಘೆ ಪ್ರಕರಣ, ಕುಂದಾಪುರ ತಾಲೂಕಿನಲ್ಲಿ 35 ಹಾಗೂ ಕಾರ್ಕಳ ತಾಲೂಕಿನಲ್ಲಿ 27 ಪ್ರಕರಣ ದಾಖಲಾಗಿದೆ.

UDP-30-1A-Dengue

ಹತೋಟಿಯಲ್ಲಿ ಮಲೇರಿಯಾ

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಹಾಗೂ ಮಾರಕ ಕಾಯಿಲೆಯಾದ ಮಲೇರಿಯಾ ತನ್ನ ಅಟ್ಟಹಾಸದಿಂದ ತಣ್ಣಗಾಗಿದೆ. 2012-13ನೇ ಸಾಲಿನಲ್ಲಿ ಜಿಲ್ಲೆಯ ಜನರನ್ನು ಬೆಂಬಿಡದ ಭೂತದಂತೆ ಈ ಕಾಯಿಲೆ ಕಾಡಿತ್ತು. ಆರೋಗ್ಯ ಇಲಾಖೆಯ ಮುತುವರ್ಜಿ ಹಾಗೂ ರೋಗ ಹತೋಟಿಗೆ ಕೈಗೊಂಡ ಅನೇಕ ಕಾರ್ಯ ಯೋಜನೆಯಿಂದಾಗಿ ಜಿಲ್ಲೆಯಲ್ಲಿ ಮಲೇರಿಯಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. 2024ರ ಜನವರಿಯಿಂದ ಜೂನ್​ ಅಂತ್ಯಕ್ಕೆ ಕೇವಲ 1 ಪ್ರಕರಣ ದಾಖಲಾಗಿದೆ.

ಮಿದುಳು ಜ್ವರ ನಾಪತ್ತೆ

ಡೆಂಘೆ ಹಾಗೂ ಮಲೇರಿಯಾದೊಂದಿಗೆ ಅಬ್ಬರಿಸಿದ್ದ ಮಿದುಳು ಜ್ವರ ಬಾಧಿತರ ಸಂಖ್ಯೆ ಇಳಿಮುಖವಾಗಿದೆ. 2024ರ ಜೂನ್​ ವರೆಗೆ ಒಂದೂ ಪ್ರಕರಣ ದಾಖಲಾಗಿಲ್ಲ. ಇದರೊಟ್ಟಿಗೆ ಚಿಕೂನ್​ಗುನ್ಯಾ ಕಾಯಿಲೆಯೂ ಕಣ್ಮರೆಯಾಗಿದ್ದು, ಪ್ರಸ್ತುತ 1 ಪ್ರಕರಣ ದಾಖಲಾಗಿದೆ.

ಡೆಂಘೆ ರೋಗ ಲಕ್ಷಣ

ಡೆಂಘೆ ಜ್ವರವು ಹಗಲಿನ ವೇಳೆಯಲ್ಲಿ ಕಚ್ಚುವ 'ಈಡೀಸ್ ಇಜಿಪ್ಟ್ಟೆ' ಎಂಬ ಸೊಳ್ಳೆಯಿಂದ ಬರುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುವುದು ಹೆಚ್ಚು. ಡೆಂಘೆ ಜ್ವರ, ಡೆಂಘೆ ರಕ್ತಸ್ರಾವ ಜ್ವರ(ಡಿಎಚ್ ಎಫ್) ಹಾಗೂ ಡೆಂಘೆ ಶಾಕ್ ಸಿಂಡ್ರೋಮ್ (ಡಿ ಎಸ್ ಎಸ್) ಎಂಬ ಮೂರು ಬಗೆಯ ಜ್ವರ ವಿಧಗಳು ಇವೆ. ಇದ್ದಕ್ಕಿಂದ್ದಂತೆ ಜ್ವರ ಬರುವುದು, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳು.

ರೋಗ ಬಾರದಿರಲು ಮುನ್ನೆಚ್ಚರಿಕೆ ವಹಿಸಿ

ಈಗಾಗಲೇ ಮಳೆಗಾಲ ಆರಂಭವಾಗಿದ್ದು ಉಡುಪಿ ಜಿಲ್ಲೆಯಲ್ಲೂ ಭಾಗಶಃ ಮಳೆ ಮತ್ತು ವಿಪರೀತ ಉಷ್ಣಾಂಶದ ಹವಾಮಾನವೂ ಕಂಡು ಬರುತ್ತಿದೆ. ಇಂತಹ ವಾತಾವರಣದಲ್ಲಿಯೇ ಸೊಳ್ಳೆಗಳ ಸಂತಾನೋತ್ಪತ್ತಿಯೂ ಹೆಚ್ಚು ಆಗಲಿದ್ದು ಡೆಂಘೆ, ಮಲೇರಿಯಾ ರೋಗ ಹರಡಲು ಪೂರಕವಾಗಿರುತ್ತದೆ. ಜನರು ಜಾಗೃತರಾಗಬೇಕಿದ್ದು, ಸಾಂಕ್ರಾಮಿಕ ಕಾಯಿಲೆಯಿಂದ ರಸಿಕೊಳ್ಳಲು ಕಟ್ಟುನಿಟ್ಟಾಗಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಸಾಮಾನ್ಯ ಜ್ವರ ಬಂದರೂ ಸಹ ನಿರ್ಲಕ್ಷ್ಯ ಮಾಡದೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಮನೆಯ ಸುತ್ತಮುತ್ತ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಸೂಚಿಸಿದೆ.

2012ರಿಂದ 2024 ಮೇ ವರೆಗಿನ ಅಂಕಿ-ಅಂಶ

ವರ್ಷ ಮಲೇರಿಯಾ ಡೆಂಘೆ ಚಿಕೂನ್​ಗುನ್ಯಾ ಮಿದುಳು ಜ್ವರ
2012 2,217 -- 126 --- 03 --- 02
2013 2,205 -- 240 -- 04 ---- 02
2014 1,639 --- 130 --- 03 ----- 08 (1 ಸಾವು)
2015 1,366 -- 331 --- 03 ---- 03
2016 1,168 -- 600(1ಸಾವು) 00 ----- 01
2017 513 --- 383 --- 00 ---- 04
2018 221 --- 228 ---- 27 --- 06 (2 ಸಾವು)
2019 150 --- 280 ---- 16 ---- 05 (4 ಸಾವು)
2020 124 --- 139 --- 10 ---- 06
2021 29 --- 380 --- 10 ---- 01
2022 18 --- 513 (2ಸಾವು) 10 ---- 02 (1 ಸಾವು)
2023 16 635 (2ಸಾವು) -- 18 ---- 01
2024 (ಮೇ) 01 -- 98 --- 01 --- 00

ಉಡುಪಿ ಜಿಲ್ಲೆಯಲ್ಲಿ ಕೈಗೊಂಡ ವಿವಿಧ ಸಮರೋಪಾದಿಯ ಚಟುವಟಿಕೆಗಳ ಅನುಷ್ಠಾನದಿಂದ ಮಲೇರಿಯಾ ರೋಗ ನಿವಾರಣಾ ಹಂತಕ್ಕೆ ಬಂದಿದೆ. 2025ರ ವೇಳೆಗೆ ಮಲೇರಿಯಾ ನಿವಾರಣೆ ಗುರಿ ಸಾಧಿಸುವ ಉದ್ದೇಶ ಹೊಂದಿದ್ದೇವೆ. ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ರೋಗ ಬಂದ ಬಳಿಕ ಎಚ್ಚೆತ್ತುಕೊಳ್ಳುವ ಬದಲಾಗಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ದೊಡ್ಡ ಔಷಧವಾಗಿದೆ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಡೆಂಘೆ ಕಾಯಿಲೆ ಹತೋಟಿ ಸಾಧ್ಯ. | ಡಾ. ಈಶ್ವರ್ ಪಿ. ಗಡಾದ್.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ

ಸಾಂಕ್ರಾಮಿಕ ರೋಗ ತಡೆಗೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಒತ್ತು ನೀಡಲಾಗುತ್ತಿದೆ. ಡೆಂಘೆ ತಡೆಯುವ ನಿಟ್ಟಿನಲ್ಲಿ ಸೊಳ್ಳೆಗಳ ಕಡಿವಾಣಕ್ಕೆ ಲಾರ್ವಾ ಉತ್ಪತ್ತಿ ತಾಣಗಳ ನಾಶ ಮಾಡಲು ಜಿಲ್ಲಾದ್ಯಂತ ಚಟುವಟಿಕೆ ಜಾರಿಯಲ್ಲಿದ್ದು, ವಿಶೇಷ ತಂಡ ರಚಿಸಲಾಗಿದೆ. ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಜನರು ಸಾಧ್ಯವಾದಷ್ಟು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮ ಅಳವಡಿಸಿಕೊಳ್ಳಬೇಕು. | ಡಾ. ಪ್ರಶಾಂತ್ ಭಟ್. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net