

ಬೆಳಗಾವಿ: ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ಡೆಂಗಿ ಪತ್ತೆ ಪರೀಕ್ಷೆ ಸಂಖ್ಯೆ ಹೆಚ್ಚಿಸುವ ಕೆಲಸ ಆಗಬೇಕು. ಪಾಸಿಟಿವ್ ಇರುವ ವ್ಯಕ್ತಿಗಳಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆ, ಡೆಂಗಿ ನಿಯಂತ್ರಣ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಡೆಂಗಿ ಹೆಚ್ಚು ಪತ್ತೆಯಾಗುತ್ತಿರುವ ಪ್ರದೇಶಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ನಿಯಂತ್ರಣಕ್ಕೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಆರೋಗ್ಯ ಇಲಾಖೆ ಕೈಗೊಳ್ಳುವ ಪ್ರತಿಯೊಂದು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂಗಳು ಕಡ್ಡಾಯವಾಗಿ ಪಾಲಿಸಬೇಕು. ಚರಂಡಿಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಅವಶ್ಯಬಿದ್ದರೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಬೇಕು ಎಂದರು.
ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಅಗತ್ಯವಿರುವ ರಕ್ಷಣಾ ಪರಿಕರ ಸುವ್ಯವಸ್ಥೆಯಲ್ಲಿಡಬೇಕು. ನಗರ, ಸ್ಥಳೀಯ-ಸಂಸ್ಥೆ ಹಾಗೂ ಗ್ರಾಪಂಗಳಲ್ಲಿ ಗುರುತಿಸಲಾದ ಪರಿಹಾರ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸೌಲಭ್ಯ ಕುರಿತು ಪರಿಶೀಲಿಸಿ, ವರದಿ ನೀಡಬೇಕು. ಗೋಶಾಲೆಗಳ ವಿವರ ಒದಗಿಸಬೇಕು ಎಂದೂ ಡಿಸಿ ಸೂಚಿಸಿದರು.
ಅತಿವೃಷ್ಟಿಯಿಂದ ಮನೆ, ಜೀವ ಹಾನಿಯಾದ ಪ್ರಕರಣಗಳು ಕಂಡುಬಂದಲ್ಲಿ ಕೂಡಲೆ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ನಿಗಾವಹಿಸಬೇಕು. ಜೀವಹಾನಿಯಾಗದಂತೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಈಗಿನಿಂದಲೇ ಆರೋಗ್ಯ ಇಲಾಖೆಯು ಔಷಧ ದಾಸ್ತಾನು ಮಾಡಿಟ್ಟುಕೊಳ್ಳುವ ಜತೆಗೆ ವಿಷ ಜಂತುಗಳ ಕಡಿತದಿಂದಾಗುವ ಸಾವು-ನೋವು ತಪ್ಪಿಸಲು ಬೇಕಾದಂತಹ ಔಷಧ ತಪ್ಪದೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಂಭವವಿದ್ದು, ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣೆ ಸಭೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಗಂಗಾಧರ ದಿವಟರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ ಇತರರಿದ್ದರು.