

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಧಾರವಾಡದ ರೋಟರಿ ಕ್ಲಬ್ ಮಿಡ್ಟೌನ್, ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢಶಾಲೆ ಆಶ್ರಯದಲ್ಲಿ ಬುಧವಾರ ಡೆಂಘೆ ನಿಯಂತ್ರಣ ಜಾಗೃತಿ ಜಾಥಾ ಜರುಗಿತು.
ಶಾಲೆ ವಿದ್ಯಾರ್ಥಿಗಳು ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವಂತಹ ಭಿತ್ತಿ ಪಟಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಜನರ ಗಮನ ಸೆಳೆದರು.
ಜಾಥಾ ನಿಮಿತ್ತ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ನೀಲಾ ಅರಳಿಮಟ್ಟಿ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ಬೀದಿ ನಾಟಕ ಗಮನ ಸೆಳೆಯಿತು. ವಿದ್ಯಾರ್ಥಿನಿಯರು ಕುಟುಂಬದ ಪಾತ್ರಧಾರಿಗಳಾಗಿ ನಿತ್ಯದ ಘಟನಾವಳಿಗಳು ಸೇರಿ ಡೆಂಘೆ ಹರಡಲು ನಮ್ಮ ನಿರ್ಲಕ್ಷತೆ, ಉದಾಸೀನತೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು.
ಅಮ್ಮಿನಬಾವಿಯ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರುಪ್ ಎಜ್ಯುಕೇಶನ್ ಕಮಿಟಿ ಪದಾಧಿಕಾರಿಗಳು, ಯುವಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.