ಹೊನ್ನಾಳಿ ತಾಲೂಕಲ್ಲಿ ಡೆಂಘೆ ಪ್ರಕರಣ ಹೆಚ್ಚಳ

Dengue, Fever, Prevention,
Published on

ಹೊನ್ನಾಳಿ: ತಾಲೂಕಾದ್ಯಂತ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನವರಿಯಿಂದ ಈವರೆಗೂ 49 ಪ್ರಕರಣಗಳು ದೃಢಪಟ್ಟಿವೆ. 02 ಚಿಕೂನ್ ಗುನ್ಯಾ ಕೂಡ ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಎಂದು ಉಪವಿಭಾಗಾಧಿಕಾರಿ ವಿ. ಅಭಿಷೇಕ್ ತಿಳಿಸಿದರು.

ಹೊನ್ನಾಳಿ ತಾಲೂಕಿನಲ್ಲಿ ಡೆಂಘೆ ಜ್ವರ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದರು.

ಜೂನ್ 25 ರಂದು ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಹನುಮನಹಳ್ಳಿಯ ವಿದ್ಯಾರ್ಥಿನಿ ಅನುಷಾ ಹಾಲೇಶ್ (18) ಮೃತಪಟ್ಟಿರುವ ಘಟನೆ ಆತಂಕಕ್ಕೀಡು ಮಾಡಿದೆ ಎಂದರು.

ಚಿಕ್ಕ ವಯಸ್ಸಿನವರು ಹೆಚ್ಚಾಗಿ ಡೆಂಘೆ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಶಾಲಾ- ಕಾಲೇಜುಗಳು, ವಿದ್ಯಾರ್ಥಿನಿಲಯಗಳಲ್ಲಿ ಲಾರ್ವಾಗಳು ಉತ್ಪತ್ತಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದರು.

ಸೊಳ್ಳೆಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ, ಗ್ರಾಮಾಡಳಿತಗಳು ಮುಂದಾಗುವಂತೆ ಸೂಚಿಸಿದರು. ಪಟ್ಟಣದಲ್ಲಿ ಪುರಸಭೆಯಿಂದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಖಾಲಿ ನಿವೇಶನಗಳಲ್ಲಿ ಎಸೆಯಲ್ಪಟ್ಟಿರುವ ತೆಂಗಿನ ಚಿಪ್ಪು, ಟೈರ್, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ನೀರಿನಲ್ಲೂ ಲಾರ್ವಾಗಳು ಉತ್ಪತ್ತಿಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕು ಎಂದರು.

ಸಾರ್ವಜನಿಕರು ಸೊಳ್ಳೆ ಪರದೆಗಳನ್ನು ಬಳಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ಸೊಳ್ಳೆ ತಡೆಗೆ ಬಿಸಿಎಂ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಮುಂದಾಗಬೇಕು. ಈ ಕುರಿತು ಪಟ್ಟಣದ ಘನತ್ಯಾಜ್ಯ ಘಟಕಗಳ ವಾಹನಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆಗೆ ಮುಂದಾಗಬೇಕು. ಈ ವಿಷಯದಲ್ಲಿ ಪ್ರತಿ ಇಲಾಖೆಯೂ ತಮ್ಮ ವ್ಯಾಪ್ತಿಯಲ್ಲಿ ಕ್ರಮ ವಹಿಸಬೇಕು ಎಂದರು.

ಕೀಟ ತಜ್ಞ ಸತೀಶ್ ಮಾಳಿಗೆ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಪ್ಪ ಮಾತನಾಡಿ, ಜ್ವರ, ಕಣ್ಣು ನೋವು, ಮೈ ಕೈ ನೋವು, ಮೈಮೇಲೆ ಗಂದೆಯಂಥ ಕಲೆಗಳು ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರಾರಂಭಿಕ ಹಂತದಲ್ಲೇ ಇವುಗಳನ್ನು ಪತ್ತೆ ಹಚ್ಚಿದರೆ ಗುಣಪಡಿಸಬಹುದು. ಇಲ್ಲದಿದ್ದರೆ ಜೀವ ಉಳಿಸುವುದು ಕಷ್ಟ ಎಂದು ಹೇಳಿದರು.

ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಪುರಸಭೆಯ ಮುಖ್ಯಾಧಿಕಾರಿ ಲೀಲಾವತಿ ಇತರರಿದ್ದರು.

ಡೆಂಘೆ ಜ್ವರದಿಂದ ವಿದ್ಯಾರ್ಥಿನಿ ಸಾವು: ಹೊನ್ನಾಳಿ ತಾಲೂಕಿನ ಹನುಮನಹಳ್ಳಿಯ ವಿದ್ಯಾರ್ಥಿನಿ ಅನುಷಾ ಹಾಲೇಶ್ (18) ಇತ್ತೀಚೆಗೆ ತಾನೇ ಪಿಯುಸಿ ಪರೀಕ್ಷೆಯಲ್ಲಿ ಶೇ. 93ರಷ್ಟು ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಜ್ವರ ಬಂದ ನಂತರದಲ್ಲಿ ಸಾಸ್ವೆಹಳ್ಳಿಯ ಸರ್ಕಾರಿ ಆಸ್ಪತ್ರೆ ಮತ್ತು ಸಿದ್ದೇಶ್ವರ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಅಲ್ಲಿಂದ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಳು ಎಂದು ಆರೋಗ್ಯ ಇಲಾಖೆಯ ಶಿವಪದ್ಮಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net