ರಾಜ್ಯದಲ್ಲಿ ಡೆಂಘೆ ಮತ್ತು ಝೀಕಾ ವೈರಸ್ ಬಗ್ಗೆ ಎಚ್ಚರ ವಹಿಸಲು ಆರೋಗ್ಯಾಧಿಕಾರಿಗಳು ಸೂಚನೆ

Dengue minister meeting
Published on

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ನಿಯಂತ್ರಣ ಕ್ರಮಗಳ ಜತೆಗೆ ಝೀಕಾ ವೈರಸ್ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡೆಂಘೆ ಪ್ರಕರಣಗಳು ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ಆಂಭಿಸುವಂತೆ ನಿರ್ದೇಶನ ನೀಡಿದ್ದಾರೆ.

ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜತೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಡೆಂಘೆ ಹೆಚ್ಚಿರುವ ಪ್ರದೇಶಗಳನ್ನು ಪತ್ತೆ ಹಚ್ಚಿ ಅಲ್ಲಿ ರೋಗ ಹರಡದಂತೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಡೆಂಘೆ ಹೆಚ್ಚಿರುವ ಪ್ರದೇಶದಲ್ಲಿ ಯಾರಿಗೆ ಜ್ವರ ಕಂಡುಬಂದರೂ ಕಡ್ಡಾಯವಾಗಿ ಡೆಂಘೆ ಪರೀಕ್ಷೆಗೆ ಒಳಪಡಿಸಬೇಕು. ಆರಂಭದಲ್ಲಿಯೇ ಡೆಂಘೆ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯವಿದೆ. ಒಂದು ವೇಳೆ ವಿಳಂಬವಾದರೆ ಸಾವುಗಳು ಸಂಭವಿಸಲಿವೆ. ಹಾಗಾಗಿ ಡೆಂಘೆ ರೋಗ ಹರಡುವಿಕೆ ಮತ್ತು ಸಾವು ತಡೆಯಲು ಆದ್ಯತೆ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜನಜಾಗೃತಿ:ಡೆಂಘೆ ಮತ್ತು ಝೀಕಾ ವೈರಸ್ ನಿಯಂತ್ರ ಕ್ರಮಗಳ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ನೀಡಬೇಕು. ವೈದ್ಯಕೀಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಘೆ ಕುರಿತು ಅರಿವು ಮೂಡಿಸಬೇಕು.

ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಸಾರ್ವಜನಿಕರ ಜೊತೆಗೂಡಿ ವಾರದಲ್ಲಿ ಒಂದು ದಿನ (ಪ್ರತಿ ಶುಕ್ರವಾರ) ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ಅಭಿಯಾನದಲ್ಲಿ ಭಾಗವಹಿಸಬೇಕು. ಅದೇ ರೀತಿ ಆರೋಗ್ಯ ಇಲಾಖೆ ವತಿಯಿಂದ ಪ್ರತಿ ದಿನ ಡೆಂಘೆ ಬುಲೆಟಿನ್ ಬಿಡುಗಡೆ ಮಾಡಬೇಕೆಂದು ತಿಳಿಸಿದರು.

ಅಧಿಕ ಶುಲ್ಕ ಪಡೆದರೆ ಕ್ರಮ:ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಮಾತನಾಡಿ, ಡೆಂಘೆ ಪರೀಕ್ಷೆಗೆ ನಿಗದಿ ಮಾಡಿರುವ ದರವನ್ನು ಕಡ್ಡಾಯವಾಗಿ ಪಾಲನೆ ಆಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಸರ್ಕಾರ ನಿಗದಿ ಪಡಿಸಿರುವ ದರವನ್ನೇ ಪಡೆಯಬೇಕು. ಅದಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಝೀಕಾ ಬಗ್ಗೆ ನಿಗಾ:ಈಡಿಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕಂಡು ಬರಲಿದ್ದು, ನೆರೆ ರಾಜ್ಯ ಕೇರಳದಲ್ಲಿ ಝೀಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಪ್ರಕರಣ ಪತ್ತೆಯಾಗಿದೆ. ಆದರೆ ಇನ್ನೂ ಖಚಿತವಾಗಿಲ್ಲ. ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net