

ಮಡಿಕೇರಿ:
ತಾಲೂಕು ಕ್ಷಿಪ್ರ ಕಾರ್ಯಪಡೆ ತಂಡದವರು ಮಡಿಕೇರಿಯಲ್ಲಿ ವಾರ್ಡ್ವಾರು ಮನೆ ಮನೆಗಳಿಗೆ ಭೇಟಿ ನೀಡಿ ನೀರಿನ ತಾಣಗಳಲ್ಲಿ ಲಾರ್ವಾ ಉತ್ಪತ್ತಿಯಾಗಿರುವುದನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವ ಮೂಲಕ ಡೆಂಘಿ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಶುಕ್ರವಾರ ನಡೆಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್ ಪಾಲ್ಗೊಂಡು ಮಾತನಾಡಿ ಡೆಂಘಿ ಮಾಸಾಚರಣೆ ನಿಮಿತ್ತ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನೀರಿನ ತಾಣಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಖಾಲಿ ಮಾಡಿ ಒರೆಸಿ, ಒಣಗಿಸಿ ನೀರು ಶೇಖರಿಸುವುದು ಮತ್ತು ಮುಚ್ಚಳದಿಂದ ಮುಚ್ಚಿಡುವುದು, ಎಲ್ಲರೂ ಸೊಳ್ಳೆಗಳಿಂದ ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು, ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ತ್ಯಾಜ್ಯ ಪರಿಕರಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮಾಡಬೇಕು. ಪರಿಸರ ಶುಚಿತ್ವ ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಜ್ವರ ಬಂದ ತಕ್ಷಣ ವೈದ್ಯರಲ್ಲಿ ತೋರಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚೇತನ್ ಮಾತನಾಡಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ್ವರ ಮತ್ತು ಗುಣತ್ಮಾಕ ಲಾರ್ವಾ ಸರ್ವೇಕ್ಷಣೆ ನಡೆಸಿ ಜನರಲ್ಲಿ ಆರೋಗ್ಯ ಶಿಕ್ಷಣ ನಿಡುತ್ತಾ ತಂಡದವರು ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕು. ಮನೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಎಳನೀರು ಚಿಪ್ಪು, ಒಡೆದ ಬಾಟಲಿ, ಟೈರು, ಟ್ಯೂಬ್, ಒಳಕಲ್ಲು, ಪ್ಲಾಸ್ಟಿಕ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇದರಿಂದ ಲಾರ್ವಾಗಳು ಉತ್ಪತ್ತಿಯಾಗಿ ಸೊಳ್ಳೆಗಳ ಕಚ್ಚುವಿಕೆಯಿಂದ ಡೆಂಘಿ ಜ್ವರ ಬರುವುದನ್ನು ತಡೆಗಟ್ಟಬಹುದು ಎಂದರು.
ಜಲಾಶಯ ಬಡಾವಣೆಯಲ್ಲಿ ಲಾರ್ವಾ ಸರ್ವೇಕ್ಷಣೆ ನಡೆಸುವ ವೇಳೆ ನಗರಸಭೆ ಸದಸ್ಯೆ ಉಷಾ ಕಾವೇರಪ್ಪ ಅವರು ಇಲಾಖೆ ಕಾರ್ಯವನ್ನು ಪ್ರಶಂಶಿಸಿ ಸಾರ್ವಜನಿಕರು ಸಹಕಾರ ನೀಡಿ ಡೆಂಘಿ ನಿಯಂತ್ರಣದಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ನಗರಸಭೆಯಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಎಂಟಾಮಾಲಿಜಿಸ್ಟ್ ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾ.ಆ.ಸುರಕ್ಷಾಧಿಕಾರಿ ಮತ್ತು ಆಶಾ ಕಾರ್ಯಕರ್ತರು ಇದ್ದರು.