ಡೆಂಘೆ ನಿಯಂತ್ರಣಕ್ಕೆ ಗಂಭೀರ ಪ್ರಯತ್ನ ಅಗತ್ಯ, ಕೇಂದ್ರ ಸಚಿವ ಜೋಶಿ ಕಟ್ಟುನಿಟ್ಟಿನ ಸೂಚನೆ

IMG_20240614_203145_680-1.jpg
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಕಡೆ ಫಾಗಿಂಗ್ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚನೆ ನೀಡಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸಂಜೆ ಧಾರವಾಡ ಜಿಲ್ಲಾ ಮಟ್ಟದ ಅಧಿಕಾರಿಗಳ ಮೊದಲ ಸಭೆ ನಡೆಸಿದ ಅವರು, ಅಧಿಕಾರಿಗಳು ಗ್ರಾಮೀಣ, ನಗರ ಸೇರಿ ಎಲ್ಲ ಕಡೆ ಸಂಚಾರ ಮಾಡಬೇಕು. ಪರಿಸ್ಥಿತಿ ಅವಲೋಕಿಸಬೇಕು. ಹಳ್ಳಿಗಳಲ್ಲಿ ಡಂಗುರ ಸಾರಬೇಕು, ಮಾಧ್ಯಮ ಹಾಗೂ ಸೊಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಜನರಲ್ಲಿ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಕಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಜ್ವರ ಎಂದು ಬರುವ ರೋಗಿಗಳ ಸಮಗ್ರ ತಪಾಸಣೆ ನಡೆಸಿ ಅಗತ್ಯ ಬಿದ್ದರೆ ಅಡ್ಮೀಟ್ ಮಾಡಿಕೊಂಡು ಚಿಕಿತ್ಸೆ ನೀಡಬೇಕು. ಎನ್‌ಜಿಒ ಹಾಗೂ ಐಎಂಎ ದವರನ್ನು ಸೇರಿಸಿಕೊಂಡು ಸ್ಕೂಲ್, ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಬರುವ ಮಂಗಳವಾರದಿಂದ ಈ ಕಾರ್ಯ ನಡೆಯಲಿ ಎಂದು ಹೇಳಿದರು.

ಇನ್ಮುಂದೆ ಡೆಂಘೆ ಪ್ರಕರಣದ ಬಗ್ಗೆ ಗಂಭೀರವಾಗಿ ವರ್ತಿಸಿ, ಚಿಕಿತ್ಸೆ ಸಿಗದೇ ಯಾರಾದರೂ ತೊಂದರೆಗೆ ಒಳಪಟ್ಟರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಪ್ರತಿ ತಾಲೂಕಿಗೆ ನೋಡಲ್ ಆಫೀಸರ್ ನೇಮಿಸಿ, ಇಡೀ ಜಿಲ್ಲೆಯಲ್ಲಿ ಏಕಕಾಲಕ್ಕೆ ಡೆಂಘೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳುತ್ತೇವೆ. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಜಾಸ್ತಿ ಮಾಡುತ್ತೇವೆ. ಮೆಡಿಸಿನ್ ಸ್ಟಾಕ್ ಮಾಡುತ್ತೇವೆ. ರೋಗಿಗಳ ಮೇಲೆ ಗಮನ ಹರಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಫೋನ್ ರಿಸೀವ್ ಮಾಡಿ: ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ. ಕಮ್ಮಾರ ಅವರು ಜನಪ್ರತಿನಿಧಿಗಳ ಫೋನ್ ರಿಸೀವ್ ಮಾಡದೇ ಇರುವುದಕ್ಕೆ ಸಚಿವ ಜೋಶಿ ಗರಂ ಆದರು. ರೋಗಿಗಳಿಗೆ ಚಿಕಿತ್ಸೆ ಸಲುವಾಗಿಯೇ ಫೋನ್ ಮಾಡಿರುತ್ತೇವೆ. ಫೋನ್ ಏಕೆ ಎತ್ತುವುದಿಲ್ಲ ಎಂದು ಆಕ್ರೋಶಗೊಂಡರು. ಶಾಸಕ ಅರವಿಂದ ಬೆಲ್ಲದ ಸೇರಿ ಅನೇಕರು ಸಹ ಈ ಬಗ್ಗೆ ದೂರಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net