

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸ್ತುತ ಮಳೆಗಾಲ ಆರಂಭವಾಗಿದ್ದು ರಾಜ್ಯದಲ್ಲಿ ಡೆಂಘೆ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿಂದಾಗಿ ರಾಜ್ಯಾದ್ಯಂತ ಜೂ.28ರಂದು ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಚಾಲನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಶುಕ್ರವಾರ ಚಾಲನೆ ನೀಡಿದರು.
ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುವುದು. ಪ್ರತಿ ಶುಕ್ರವಾರ ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಸಿಬ್ಬಂದಿ ವರ್ಗದವರು ಕಚೇರಿಗಳಲ್ಲಿ, ಶಾಲಾ ಕಾಲೇಜುಗಳು ಇತ್ಯಾದಿಗಳಲ್ಲಿ ನೀರು ತುಂಬುವ ಹೆಚ್ಚು ದಿನಗಳವರೆಗೆ ಶೇಖರಣೆಯಾಗುವ ಪರಿಕರಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಘೆ ಜ್ವರ ನಿಯಂತ್ರಣ ಕ್ರಮದಲ್ಲಿ ಅತಿ ಮುಖ್ಯವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದರಿಂದ ಡೆಂಘೆ ನಿಯಂತ್ರಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ಸಾರ್ವಜನಿಕರು ಪಾಲ್ಗೊಳ್ಳಿ:ಜುಲೈ ತಿಂಗಳಿನಲ್ಲಿ ಆಚರಿಸಲ್ಪಡುವ ಡೆಂಘೆ ವಿರೋಧ ಮಾಸಾಚರಣೆಯ ಧ್ಯೇಯವಾಕ್ಯವು ’ಸಮುದಾಯದೊಂದಿಗೆ ಸೇರಿ ಡೆಂಘೆ ಜ್ವರವನ್ನು ನಿಯಂತ್ರಿಸೋಣ’ ಎಂದಾಗಿದೆ. ಈ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಡೆಂಘೆ ನಿಯಂತ್ರಣಕ್ಕೆ ಕೈಜೋಡಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಹೇಳಿದರು.