ಗದ್ದೆಗಳಿದು ಭತ್ತದ ನಾಟಿ ಮಾಡಿದ ಸಿಇಒ: ಯಾಂತ್ರೀಕೃತ ವಿಧಾನದ ಪ್ರಾತ್ಯಕ್ಷಿತೆ ನೀಡಿದ ನಂದಿನಿ

Demonstration of the mechanized method Mandya
Published on
ಮಂಡ್ಯ: ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಅವರು ಸ್ವತಃ ಭತ್ತ ನಾಟಿ ಮಾಡಿದರು.
ಜಿಪಂ ಮತ್ತು ಕೃಷಿ ಇಲಾಖೆ ಮಂಡ್ಯ ವತಿಯಿಂದ ತಾಲೂಕಿನ ಹೊಳಲು ಗ್ರಾಮದ ದಕ್ಷ ಯಂತ್ರ ನಾಟಿ ಸಸಿಮಡಿ ತಯಾರಿಕಾ ಘಟಕದಲ್ಲಿ ಏರ್ಪಡಿಸಲಾಗಿದ್ದ ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ ಅವರು, ಯಾಂತ್ರೀಕೃತ ವಿಧಾನದ ಮೂಲಕ ಮಹಿಳೆಯರು ಕೂಡ ಭತ್ತ ನಾಟಿ ಮಾಡಬಹುದು ಎಂಬ ವಿಶ್ವಾಸ ತುಂಬಲು ಸ್ವತಃ ಅವರೇ ನಾಟಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.
ಬಳಿಕ ಮಾತನಾಡಿದ ಅವರು, ಭತ್ತ ನಾಟಿಗೆ ಯಂತ್ರ ಬಳಸಲು ಮಹಿಳೆಯರಿಗೆ ಸಾಧ್ಯವಿಲ್ಲ, ಅವರಿಂದ ಯಂತ್ರವನ್ನು ನಿರ್ವಹಣೆ ಮಾಡಲು ಅಸಾಧ್ಯ ಎಂಬ ಕಲ್ಪನೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ. ಮಹಿಳೆಯರು ಕೂಡ ಯಂತ್ರದ ಮೂಲಕ ಭತ್ತ ನಾಟಿ ಮಾಡಬಹುದು ಹಾಗೂ ಯಂತ್ರವನ್ನು ನಿರ್ವಹಣೆ ಮಾಡಬಹುದು ಎಂದು ತರಬೇತಿಗೆ ಬಂದಿದ್ದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಭತ್ತ ನಾಟಿಗೆ ಕೃಷಿ ಕೂಲಿಕಾರರು ಸರಿಯಾದ ಸಮಯದಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದ ಸರಿಯಾದ ಸಮಯದಲ್ಲಿ ನಾಟಿ ಮಾಡಲು ಸಾಧ್ಯವಾಗದೇ ಇಳುವರಿ ಕಡಿಮೆಯಾಗುತ್ತಿದೆ. ಯಾಂತ್ರೀಕೃತ ವಿಧಾನದ ಭತ್ತ ನಾಟಿಯಿಂದ ಭತ್ತ ನಾಟಿಯ ವೆಚ್ಚ ತಗ್ಗಿಸಬಹುದಾಗಿದೆ ಹಾಗೂ ಕಡಿಮೆ ಸಮಯದಲ್ಲಿ ನಾಟಿ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿ ನೊಂದಾಯಿತ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಒಂಟಿ ಕಣ್ಣಿನ ಕಬ್ಬಿನ ಸಸಿ ಮಡಿ ತಯಾರಿಸುವುದು ಹಾಗೂ ಯಂತ್ರ ನಾಟಿ ಸಸಿಮಡಿ ತಯಾರಿಸುವ ಕುರಿತಂತೆ ಒಂದು ದಿನದ ತರಬೇತಿಯನ್ನು ಏರ್ಪಡಿಸಲಾಗಿತ್ತು.
ಯಾಂತ್ರೀಕೃತ ವಿಧಾನದ ಭತ್ತ ನಾಟಿಗೆ ಸಸಿಮಡಿಗಳನ್ನು ತಯಾರಿಸುವ ವಿಧಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ತರಬೇತಿ ನೀಡಿ, ಅವರಿಂದ ರೈತರಿಗೆ ಉತ್ತಮ ಗುಣಮಟ್ಟದ ಭತ್ತದ ಸಸಿಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಸಹಾಯಕ ಕೃಷಿ ನಿರ್ದೇಶಕ ಶ್ರೀಹರ್ಷ ಸೇರಿದಂತೆ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net